ಲಂಡನ್: ಸಮಾಜದ ಮೇಲೆ ದೊಡ್ಡ ಪ್ರಮಾಣದಲ್ಲಿ ಪ್ರಭಾವ ಬೀರುವ ವಿದ್ಯಾರ್ಥಿಗಳಿಗೆ ಕೊಡುವ 1ಲಕ್ಷ ಡಾಲರ್ (₹86 ಲಕ್ಷ) ಮೊತ್ತದ 'ಜಾಗತಿಕ ವಿದ್ಯಾರ್ಥಿ ಪ್ರಶಸ್ತಿ'ಯ ಅತ್ಯುತ್ತಮ 50ರ ಆಯ್ಕೆ ಪಟ್ಟಿಯಲ್ಲಿ ಭಾರತದ ಐವರು ವಿದ್ಯಾರ್ಥಿಗಳು ಸ್ಥಾನ ಪಡೆದಿದ್ದಾರೆ.
16 ವರ್ಷ ತುಂಬಿದ ವಿದ್ಯಾರ್ಥಿಗಳು ಈ ಪ್ರಶಸ್ತಿಗಾಗಿ ನೋಂದಾಯಿಸಿಕೊಳ್ಳಬಹುದು.
ನೋಂದಣಿ ಮಾಡಿಕೊಂಡ ಶೈಕ್ಷಣಿಕ ಸಂಸ್ಥೆ ಅಥವಾ ವಿದ್ಯಾರ್ಥಿಗಳಿಗೆ ತರಬೇತಿ ಹಾಗೂ ಕೌಶಲ ಕಾರ್ಯಕ್ರಮಗಳನ್ನು ಹೇಳಿಕೊಡಲಾಗುತ್ತದೆ. ಅರೆಕಾಲಿಕ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ ಕೋರ್ಸ್ ಕಲಿಯಲು ಅವಕಾಶವಿದೆ.
'ದಿ ಇಂಟರ್‌ನ್ಯಾಷನಲ್ ಸ್ಕೂಲ್ ಬೆಂಗಳೂರು' ವಿದ್ಯಾರ್ಥಿ ಜಹಾನ್ ಅರೋರಾ, ಜೈಪುರದ ಜಯಶ್ರೀ ಪೆರಿವಾಲ್ ಇಂಟರ್‌ನ್ಯಾಷನಲ್ ಸ್ಕೂಲ್‌ನ ಆದರ್ಶ್ ಕುಮಾರ್, ಮನ್ನತ್ ಸಮ್ರಾ, ಮಹಾರಾಷ್ಟ್ರ ಕಸಮ್‌ಪುರದ ಸೆಕೆಂಡರಿ ಸ್ಕೂಲ್‌ನ ವಿದ್ಯಾರ್ಥಿ ಧೀರಜ್ ಗತ್‌ಮಾನೆ, ದೆಹಲಿಯ ಹೆರಿಟೇಜ್ ಇಂಟರ್‌ನ್ಯಾಷನಲ್ ಸ್ಕೂಲ್‌ನ ಶಿವಂಶ್ ಗುಪ್ತಾ ಅವರು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಅರೋರಾ ಅವರು ಎಚ್‌ಐವಿ ಪಾಸಿಟಿವ್ ಹೊಂದಿರುವವರ ಏಳ್ಗೆಗಾಗಿ ದೇಣಿಗೆ ಸಂಗ್ರಹ ಕಾರ್ಯಕ್ಕಾಗಿ ಆಯ್ಕೆಯಾಗಿದ್ದಾರೆ.
148 ದೇಶಗಳಿಂದ 11 ಸಾವಿರ ಅರ್ಜಿಗಳು ಸಲ್ಲಿಕೆಯಾಗಿದ್ದವು. ಮೊದಲ ಹತ್ತರ ಪಟ್ಟಿಯಲ್ಲಿ ಸ್ಥಾನ ಪಡೆದ ವಿದ್ಯಾರ್ಥಿಗಳ ಪಟ್ಟಿ ಮುಂದಿನ ತಿಂಗಳು ಪ್ರಕಟವಾಗಲಿದೆ. ವಿಜೇತ ವಿದ್ಯಾರ್ಥಿಗಳ ಹೆಸರನ್ನು ಮುಂದಿನ ವರ್ಷ ಪ್ರಕಟಿಸಲಾಗುತ್ತದೆ.




