ಕುಂಬಳೆ: ಈ ಓಣಂನಿಂದ ಖಾದಿಯ 'ನ್ಯೂ ಜೆನ್' ಬಟ್ಟೆಗಳು ಆನ್‍ಲೈನ್ ಮಾರುಕಟ್ಟೆ ಕ್ಷೇತ್ರಕ್ಕೂ ಪ್ರವೇಶಿಸುತ್ತಿವೆ. ಹೊಸ ಪೀಳಿಗೆಯನ್ನು ಆಕರ್ಷಿಸಲು ವಿವಿಧ ಬಣ್ಣಗಳ ಪ್ಯಾಂಟ್, ಕುರ್ತಾ ಮತ್ತು ಉದ್ದನೆಯ ಬ್ಲೌಸ್‍ಗಳನ್ನು ಬಿಡುಗಡೆ ಮಾಡುವ ಮೂಲಕ ಖಾದಿ 'ನ್ಯೂ ಜೆನ್' ಆಗಲು ಸಿದ್ಧವಾಗಿದೆ ಎಂದು ಖಾದಿ ಮಂಡಳಿಯ ಉಪಾಧ್ಯಕ್ಷ ಪಿ. ಜಯರಾಜನ್ ಹೇಳಿದ್ದಾರೆ.
ರಾಷ್ಟ್ರೀಯ ಚಳುವಳಿಯಷ್ಟೇ ಹಳೆಯದಾದ ಖಾದಿಯ ಮೌಲ್ಯವನ್ನು ಈಗ ಹೊಸ ಪೀಳಿಗೆಗೆ ರವಾನಿಸಲಾಗುವುದು. ಈ ಬಾರಿ, ವಕೀಲರಿಗೆ ಕೋಟುಗಳನ್ನು ತಯಾರಿಸುವ ಮೂಲಕ ಹೊಸ ಪ್ರಯೋಗಕ್ಕೆ ಒಳಗಾಗುತ್ತಿರುವ ಖಾದಿಯ ಎಲ್ಲಾ ಮಾರಾಟಗಳಿಗೆ ಆಗಸ್ಟ್ 1 ರಿಂದ ಶೇ. 30 ರಷ್ಟು ರಿಯಾಯಿತಿ ಘೋಷಿಸಲಾಗಿದೆ. ಖಾದಿ ಓಣಂ ಮಾರುಕಟ್ಟೆ ಮೇಳವು ಆಗಸ್ಟ್ 16 ರಿಂದ ಸಕ್ರಿಯವಾಗಲಿದೆ. ಮಕ್ಕಳ ಬಟ್ಟೆ, ಕುಶನ್, ಬೆಡ್ ಶೀಟ್‍ಗಳು ಮತ್ತು ಉಡುಗೊರೆ ಬಟ್ಟೆಗಳು ಸಹ ಮೇಳದಲ್ಲಿ ಲಭ್ಯವಿರುತ್ತವೆ. ಖಾದಿ ಬಟ್ಟೆಗಳನ್ನು ಉತ್ತೇಜಿಸುವ ಉದ್ದೇಶದಿಂದ ಕೇರಳ ಖಾದಿ ಗ್ರಾಮೋದ್ಯೋಗ ಮಂಡಳಿಯ ನೇತೃತ್ವದಲ್ಲಿ ಕಾಸರಗೋಡು ಜಿಲ್ಲಾ ಪಂಚಾಯತಿ ವೀಡಿಯೊ ಕಾನ್ಫರೆನ್ಸ್ ಹಾಲ್‍ನಲ್ಲಿ ನಡೆದ ಸಭೆಯನ್ನು ಖಾದಿ ಗ್ರಾಮೋದ್ಯೋಗ ಮಂಡಳಿಯ ಉಪಾಧ್ಯಕ್ಷ ಪಿ. ಜಯರಾಜನ್ ಉದ್ಘಾಟಿಸಿದರು. ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಪಿ. ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತಿ ಕಾರ್ಯದರ್ಶಿ ಶ್ಯಾಮಲಕ್ಷ್ಮಿ, ಖಾದಿ ಮಂಡಳಿ ಯೋಜನಾಧಿಕಾರಿ ಸುಭಾಷ್ ಹಾಗೂ ವಿವಿಧ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಮಾತನಾಡಿದರು. ಸಭೆಯಲ್ಲಿ ಎಲ್ಲಾ ಶಿಕ್ಷಕರು, ಸೇವಾ ಮತ್ತು ಸಂಘಟನಾ ಪ್ರತಿನಿಧಿಗಳು ಭಾಗವಹಿಸಿದ್ದರು. ಪಯ್ಯನ್ನೂರು ಖಾದಿ ಕೇಂದ್ರದ ವ್ಯವಸ್ಥಾಪಕ ಶಿಬು ವಂದಿಸಿದರು.


