ಭಾರತದ ಬಲವಾದ ಆರ್ಥಿಕ ಮೂಲಭೂತ ಅಂಶಗಳು,ಪೂರಕ ಜನಸಂಖ್ಯೆ ಮತ್ತು ಹಾಲಿ ನಡೆಯುತ್ತಿರುವ ರಚನಾತ್ಮಕ ಸುಧಾರಣೆಗಳು ಅದರ ದೀರ್ಘಾವಧಿ ಬೆಳವಣಿಗೆಯ ಚಾಲಕ ಶಕ್ತಿಗಳಾಗಿವೆ ಎಂದು ಇವೈ ವರದಿಯು ಹೇಳಿದೆ.
28.8 ವರ್ಷಗಳ ಸರಾಸರಿ ವಯಸ್ಸು, ಹೆಚ್ಚಿನ ಉಳಿತಾಯ ಮತ್ತು ಹೂಡಿಕೆಗಳು ಹಾಗೂ ಸರಕಾರಿ ಸಾಲ-ಜಿಡಿಪಿ ಅನುಪಾತವು 2024ರ ಶೇ.81.3ರಿಂದ 2030ರ ವೇಳೆಗೆ ಶೇ.75.8ಕ್ಕೆ ಇಳಿಯುವ ನಿರೀಕ್ಷೆಯೊಂದಿಗೆ ಭಾರತವು ಮುಂದಿನ 13 ವರ್ಷಗಳಲ್ಲಿ ಇತರ ಪ್ರಮುಖ ಆರ್ಥಿಕತೆಗಳನ್ನು ಹಿಂದಿಕ್ಕಿ ವಿಶ್ವದ ಎರಡನೇ ಅತಿ ದೊಡ್ಡ ಆರ್ಥಿಕತೆಯಾಗುವ ದಾರಿಯಲ್ಲಿದೆ ಎಂದು ವರದಿಯು ಒತ್ತಿ ಹೇಳಿದೆ.
ಈಗ ಭಾರತವು ಸುಮಾರು 4.19 ಲ.ಕೋ.ಗಳ ನಾಮಮಾತ್ರ ಜಿಡಿಪಿಯೊಂದಿಗೆ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿದೆ.
ಭಾರತ ಮತ್ತು ಅಮೆರಿಕ 2028-2030ರ ನಡುವಿನ ಸರಾಸರಿ ಬೆಳವಣಿಗೆ ದರ ಶೇ.6.5 ಮತ್ತು ಶೇ.2.1ನ್ನು(ಐಎಂಎಫ್ ಮುನ್ನಂದಾಜುಗಳ ಪ್ರಕಾರ) 2030ರ ಬಳಿಕವೂ ಕಾಯ್ದುಕೊಂಡರೆ 2038ರ ವೇಳೆಗೆ ಖರೀದಿ ಶಕ್ತಿ ಸಮಾನತೆ(ಪಿಪಿಪಿ) ಪರಿಭಾಷೆಯಲ್ಲಿ ಭಾರತವು ಅಮೆರಿಕದ ಆರ್ಥಿಕತೆಯನ್ನು ಹಿಂದಿಕ್ಕಬಹುದು ಎಂದು ವರದಿಯು ಹೇಳಿದೆ.




