ನವದೆಹಲಿ : 79ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಡಿದ ಭಾಷಣದ ಪ್ರಮುಖ ಕ್ಷಣಗಳನ್ನು ಮತ್ತು ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆಯನ್ನು ಒಳಗೊಂಡ ಒಂದು ಚಿಕ್ಕ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.
ಪ್ರಧಾನಿ ಮೋದಿ ತಮ್ಮ ಅಧಿಕೃತ 'ಎಕ್ಸ್' (X) ಖಾತೆಯಲ್ಲಿ ಹಂಚಿಕೊಂಡ ಈ ವಿಡಿಯೋ, ಈವರೆಗೆ 47 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 92,000ಕ್ಕೂ ಹೆಚ್ಚು ಮೆಚ್ಚುಗೆಗಳನ್ನು ಗಳಿಸಿದೆ.
ದೆಹಲಿಯ ಕೆಂಪುಕೋಟೆ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕಂಗೊಳಿಸುತ್ತಿರುವುದು.
ಈ ವರ್ಷದ ಸ್ವಾತಂತ್ರ್ಯೋತ್ಸವದ ಥೀಮ್ 'ನಯ ಭಾರತ' ಆಗಿದ್ದು, ಇದು 2047ರ ವೇಳೆಗೆ 'ವಿಕಸಿತ ಭಾರತ' ನಿರ್ಮಾಣ ಮಾಡುವ ಸರ್ಕಾರದ ದೂರದೃಷ್ಟಿಯನ್ನು ಪ್ರತಿಬಿಂಬಿಸುತ್ತದೆ. ಪ್ರಧಾನಿ ಮೋದಿ ಈ ಬಾರಿ 103 ನಿಮಿಷಗಳ ಸುದೀರ್ಘ ಭಾಷಣ ಮಾಡಿದ್ದು, ದೇಶದ ಅಭಿವೃದ್ಧಿ, ಕನಸುಗಳು ಮತ್ತು ಮುಂದಿನ ದಾರಿಗಳ ಬಗ್ಗೆ ವಿವರವಾಗಿ ಮಾತನಾಡಿದ್ದರು.

ಪ್ರಧಾನಿಯವರ ಭಾಷಣದ ಆಯ್ದ ಭಾಗಗಳು, 'ಆಪರೇಷನ್ ಸಿಂಧೂರ'ದ ಪುಷ್ಪಾಲಂಕಾರದ ಮೂಲಕ ಸೈನಿಕರಿಗೆ ಗೌರವ ನೀಡಿದ ದೃಶ್ಯ, ಆಕರ್ಷಕ ಪಥಸಂಚಲನ, ಕವಾಯತು, ಧ್ವಜಾರೋಹಣ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ಹಲವು ಪ್ರಮುಖ ಘಟನೆಗಳನ್ನು ಈ ನಾಲ್ಕು ನಿಮಿಷಗಳ ವಿಡಿಯೋದಲ್ಲಿ ಆಕರ್ಷಕವಾಗಿ ಸೆರೆಹಿಡಿಯಲಾಗಿದೆ. ಈ ವಿಡಿಯೋ ದೇಶಾದ್ಯಂತ ಲಕ್ಷಾಂತರ ಜನರನ್ನು ತಲುಪಿ, ಸ್ವಾತಂತ್ರ್ಯೋತ್ಸವದ ಸಂದೇಶವನ್ನು ಮತ್ತೊಮ್ಮೆ ನೆನಪಿಸಿದೆ.




