ಚೆನ್ನೈ: ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಗ್ರಾಮೀಣಾಭಿವೃದ್ಧಿ ಸಚಿವ, ಡಿಎಂಕೆ ಮುಖಂಡ ಐ.ಪೆರಿಯಸಾಮಿ ಮತ್ತು ಅವರ ಪುತ್ರ ಶಾಸಕ ಐ.ಪಿ. ಸೆಂಥಿಲ್‌ಕುಮಾರ್ ಅವರಿಗೆ ಸೇರಿದ ಹಲವು ಕಟ್ಟಡ, ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ಶನಿವಾರ ದಾಳಿ ನಡೆಸಿದೆ.
ಆದಾಯ ಮೀರಿ ಅಕ್ರಮವಾಗಿ ₹ 2.1 ಕೋಟಿ ಮೌಲ್ಯದ ಆಸ್ತಿ ಗಳಿಸಿದ ಆರೋಪ ಪೆರಿಯಸಾಮಿ ಮತ್ತು ಅವರ ಕುಟುಂಬ ಸದಸ್ಯರ ಮೇಲಿದೆ. ದಿಂಡಿಗಲ್‌ನಲ್ಲಿರುವ ವಿಶೇಷ ನ್ಯಾಯಾಲಯವು ಪೆರಿಯಸಾಮಿ, ಅವರ ಪತ್ನಿ ಪಿ. ಸುಶೀಲಾ ಮತ್ತು ಪುತ್ರ ಸೆಂಥಿಲ್‌ಕುಮಾರ್ ಅವರನ್ನು ಈ ಪ್ರಕರಣದಿಂದ ಬಿಡುಗಡೆ ಮಾಡಿತ್ತು. ಇದನ್ನು ಪ್ರಶ್ನಿಸಿ ವಿಚಕ್ಷಣಾ ದಳ ಮತ್ತು ಭ್ರಷ್ಟಾಚಾರ ನಿಗ್ರಹ ನಿರ್ದೇಶನಾಲಯ (ಡಿವಿಎಸಿ) ಮದ್ರಾಸ್ ಹೈಕೋರ್ಟ್‌ಗೆ ಪುನರ್ ಪರಿಶೀಲನೆ ಅರ್ಜಿ ಸಲ್ಲಿಸಿತ್ತು. ಪ್ರಕರಣದ ವಿಚಾರಣೆಯನ್ನು 6 ತಿಂಗಳಲ್ಲಿ ಮುಗಿಸುವಂತೆ ಮದ್ರಾಸ್ ಹೈಕೋರ್ಟ್, ದಿಂಡಿಗಲ್ ನ್ಯಾಯಾಲಯಕ್ಕೆ ಸೂಚಿಸಿದೆ.
ಇದರ ಬೆನ್ನಲ್ಲೇ ಇ.ಡಿ ದಾಳಿ ನಡೆದಿದೆ. ಚೆನ್ನೈ ಮತ್ತು ದಿಂಡಿಗಲ್‌ನಲ್ಲಿರುವ ಹಲವು ಸ್ಥಳಗಳಲ್ಲಿ ತನಿಖಾ ಸಂಸ್ಥೆ ಶೋಧ ನಡೆಸಿದೆ.
'ಮತ ಕಳ್ಳತನ' ಆರೋಪಕ್ಕೆ ಸಂಬಂಧಿಸಿದಂತೆ ದೇಶದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಉದ್ದೇಶದಿಂದ ಬಿಜೆಪಿಯು ಇ.ಡಿಯನ್ನು ವಿರೋಧ ಪಕ್ಷಗಳ ವಿರುದ್ಧ ಬಳಸಿಕೊಳ್ಳುತ್ತಿದೆ ಎಂದು ಡಿಎಂಕೆ ಆರೋಪಿಸಿದೆ.
'ಪಕ್ಷವು ಇ.ಡಿ.ಗಾಗಲಿ, ಮೋದಿ ಅವರಿಗಾಗಲಿ ಹೆದರುವುದಿಲ್ಲ' ಎಂದು ಡಿಎಂಕೆ ಸಂಘಟನಾ ಕಾರ್ಯದರ್ಶಿ ಆರ್.ಎಸ್. ಭಾರತಿ ಹೇಳಿದ್ದಾರೆ.
ಅಭಿಮತ - ಬಿಜೆಪಿಯು ಇ.ಸಿ. ಇ.ಡಿ. ಐ.ಟಿ. ಮತ್ತು ಸಿಬಿಐ ಅನ್ನು ವಿರೋಧ ಪಕ್ಷಗಳ ವಿರುದ್ಧ ಆಯುಧವಾಗಿ ಬಳಸಿಕೊಳ್ಳುತ್ತಿದೆ. ಈ ಬೆದರಿಕೆಗೆ ಮಣಿಯುವುದಿಲ್ಲ ಕನಿಮೊಳಿ ಡಿಎಂಕೆ ನಾಯಕಿ




