ಉಪ್ಪಳ: ನಾವು ಹೆಚ್ಚು ಹೆಚ್ಚು ಭಾಷೆಗಳನ್ನು ಕಲಿಯುವ ಕಾರಣ ಅನೇಕ ಸಂಸ್ಕøತಿಯ ಪರಿಚಯವಾಗುತ್ತದೆ. ಭಾಷೆಯುಂದ ಸಾಹಿತ್ಯ ಬೆಳಗುತ್ತದೆ. ಸಾಹಿತ್ಯದಿಂದ ಸಂಸ್ಕಾರ ದೊರೆಯುತ್ತದೆ. ಕನ್ನಡ ಸಾಹಿತ್ಯ ಸರಸ್ವತಿಯ ಸೇವೆ ನಿರಂತರವಾಗಬೇಕು ಎಂದು ನಿವೃತ್ತ ಶಿಕ್ಷಕ ವಿ.ಬಿ. ಕುಳಮರ್ವ ಹೇಳಿದರು.
ಅವರು ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕಾಸರಗೋಡು ಜಿಲ್ಲಾ ಘಟಕದ ಆಶ್ರಯದಲ್ಲಿ ಶನಿವಾರ ಕೊಂಡೆವೂರು ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠದಲ್ಲಿ ವಿದ್ಯಾರ್ಥಿಗಳಿಗೆ ನಡೆಸಿದ ಕನ್ನಡ ಸಾಹಿತ್ಯ ಮಾರ್ಗದರ್ಶನ ಅಭಿಯಾನದ 'ಕನ್ನಡದ ನಡಿಗೆ - ಶಾಲೆಯ ಕಡೆಗೆ' ಎಂಬ 5ನೇ ಶಿಬಿರದ ಅಧ್ಯಕ್ಷತೆ ಮಾತನಾಡಿದರು.
ಶಿಬಿರವನ್ನು ಉದ್ಘಾಟಿಸಿದ ಕಾಸರಗೋಡಿನ ಕನ್ನಡ ಭವನದ ಸ್ಥಾಪಕ ಅಧ್ಯಕ್ಷ ಡಾ. ಕೆ. ವಾಮನ್ ರಾವ್ ಬೇಕಲ್ ಮಾತನಾಡಿ, ಶಿಕ್ಷಣವು ಕೇವಲ ಅಂಕ ಗಳಿಕೆಗೆ ಸೀಮಿತವಾಗಿರದೆ, ಪಠ್ಯೇತರ ಚಟುವಟಿಕೆಗೂ ಅವಕಾಶವಾಗಬೇಕು. ಶಿಬಿರಗಳಿಂದ ಜ್ಞಾನವೃದ್ಧಿಯಾಗುತ್ತದೆ. ಕನ್ನಡ ಸಾಹಿತ್ಯವು ತಲೆಮಾರಿನಿಂದ ತಲೆಮಾರಿಗೆ ಶಕ್ತವಾಗಿ ದಾಟಬೇಕು. ಇದು ಈ ಅಭಿಯಾನದ ಮೂಲ ಉದ್ದೇಶ ಎಂದು ಹೇಳಿದರು.
ಸಭೆಯಲ್ಲಿ ಕಾಸರಗೋಡಿನ ಕನ್ನಡ ಭವನ ಪ್ರಕಾಶನದ ಮುಖ್ಯಸ್ಥೆ ಸಂಧ್ಯಾರಾಣಿ ಟೀಚರ್, ಪರಿಷತ್ತಿನ ಕಾಸರಗೋಡು ಜಿಲ್ಲಾಧ್ಯಕ್ಷ ವಿರಾಜ್ ಅಡೂರು, ಶಾಲಾ ಮುಖ್ಯ ಶಿಕ್ಷಕಿ ರೇಖಾ ಪ್ರದೀಪ್, ಪಿಟಿಎ ಅಧ್ಯಕ್ಷೆ ಆಶಾ ಪ್ರಕಾಶ್ ರೈ ಕಳಾಯಿ, ಕನ್ನಡ ಭವನದ ಕಾರ್ಯದರ್ಶಿ ವಸಂತ ಕೆರೆಮನೆ ಮೊದಲಾದವರು ಇದ್ದರು. ವಿದ್ಯಾರ್ಥಿಗಳಾದ ಪ್ರಾರ್ಥನಾ, ವೈಷ್ಣವಿ, ಸಂವೃತಾ ಪ್ರಾರ್ಥಿಸಿದರು ಶಿಕ್ಷಕಿ ಸುಮ ಎನ್ ಸ್ವಾಗತಿಸಿದರು. ದೇವರಾಜ ಆಚಾರ್ಯ ಸೂರಂಬೈಲು ವಂದಿಸಿದರು. ನಿವೃತ್ತ ಶಿಕ್ಷಕಿ ಶಶಿಕಲಾ ಟೀಚರ್ ಕುಂಬಳೆ ನಿರೂಪಿಸಿದರು. ನಂತರ ನಡೆದ ಶಿಬಿರದ ಪ್ರಬಂಧ ರಚನಾ ತರಬೇತಿಯಲ್ಲಿ ವಿ ಬಿ ಕುಳಮರ್ವ ಹಾಗೂ ಕಥಾ ರಚನಾ ತರಬೇತಿಯಲ್ಲಿ ವಿರಾಜ್ ಅಡೂರು ಹಾಗೂ ಚಿತ್ರ ರಚನಾ ತರಬೇತಿಯಲ್ಲಿ ಮೋಹನದಾಸ್ ಅನ್ನೆಪಲ್ಲಡ್ಕ ಮಾರ್ಗದರ್ಶನ ನೀಡಿದರು. ಕಮ್ಮಟದಲ್ಲಿ ಶಿಬಿರಾರ್ಥಿಗಳು ರಚಿಸಿದ 'ಪ್ರಬಂಧ ಲೋಕ' ಹಾಗೂ 'ಕಥಾ ಮಂಜರಿ' ಹಾಗೂ 'ಚಿತ್ರ ಚಿತ್ತಾರ' ಎಂಬ ಹಸ್ತಪ್ರತಿಗಳನ್ನು ಬಿಡುಗಡೆ ಮಾಡಲಾಯಿತು. ಶಿಬಿರದಲ್ಲಿ ಸುಮಾರು 140 ವಿದ್ಯಾರ್ಥಿಗಳು ಭಾಗವಹಿಸಿದ್ದರು.




.jpg)
