ಬದಿಯಡ್ಕ: ಸುಮಾರು 75 ವರ್ಷಗಳ ಹಿಂದೆ ರಚಿಸಿದ ಕವನಸಂಕಲ `ಕೆಂದಾವರೆ'ಯ ಬಿಡುಗಡೆ ಸಮಾರಂಭ ಕುರುಮುಜ್ಜಿ ಶ್ರೀ ಧರ್ಮಶಾಸ್ತಾ ಭಜನಾ ಮಂದಿರದಲ್ಲಿ ಬುಧವಾರ ಜರಗಿತು. ಕಳೆದ ವರ್ಷ ದಿವಂಗತರಾದ ಕುರುಮುಜ್ಜಿ ಈಶ್ವರ ಭಟ್ಟರು ಈ ಕವನಗಳನ್ನು ತನ್ನ ಯೌವನ ಕಾಲದಲ್ಲಿ ರಚಿಸಿದ್ದರು. ಅವರ ವರ್ಷಾಂತಿಕ ಕಾರ್ಯಕ್ರಮದಂದು ಮಕ್ಕಳಾದ ರಾಜಗೋಪಾಲ ಕುರುಮುಜ್ಜಿ ಮತ್ತು ಮನೆಯವರ ನೇತೃತ್ವದಲ್ಲಿ ಕವನಸಂಕಲನ ಬಿಡುಗಡೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ವಹಿಸಿ ಡಾ. ಡಿ. ಸದಾಶಿವ ಭಟ್ಟ ಪಳ್ಳು ನಿಡ್ಪಳ್ಳಿ ಬಿಡುಗಡೆಗೊಳಿಸಿ ಮಾತನಾಡಿ, ಈಶ್ವರ ಭಟ್ಟರ ಬುದ್ಧಿಶಕ್ತಿಯಲ್ಲಿರುವ ಹೊಳಪು ಕವನದ ರೂಪದಲ್ಲಿ ಬಂದಿದೆ. ಅವರ ಕವನದ ಅರ್ಥವನ್ನು ಗಮನಿಸಿ ಹೋಲಿಕೆಯನ್ನು ನೀಡಬೇಕು ಎಂದು ತಿಳಿಸಿದ ಅವರು ತಮ್ಮ ಸಂತೋಷಕ್ಕಾಗಿ ಕಾವ್ಯವನ್ನು ಬರೆದಿದ್ದಾರೆ ಎಂದರು.
ಹಿರಿಯರಾದ ಕೋಟೆ ರಾಮ ಭಟ್ ಮಾತನಾಡಿ, ಬುದ್ಧಿಗೆ ಪ್ರಚೋದನೆಗೊಂಡಾಗ ಮನದ ಒಳಗಿನ ಮಾತು ಕಾವ್ಯ, ಕವನದ ರೂಪದಲ್ಲಿ ವಿಕಾಸಗೊಳ್ಳುತ್ತದೆ. ತನ್ನ ಮದುವೆಗೆ ಮೊದಲು ಈಶ್ವರ ಭಟ್ಟರ ಧೀಶಕ್ತಿಯಿಂದ ಪ್ರೇಮವೆಂಬ ತಾವರೆ ನಾನಾವಿಚಾರದಲ್ಲಿ ಅರಳಿದೆ. ಇದನ್ನು ಓದಿ ಅರ್ಥಮಾಡಿಕೊಂಡಾಗ ನಾವು ಎಳವೆಗೆ ಜಾರುವುದರೊಂದಿಗೆ ಹೊಸತನ, ಪ್ರೇಮಾಂಕುರ ಉಂಟುಮಾಡುತ್ತದೆ. ವ್ಯಕ್ತಿಯಲ್ಲಿರುವ ಆಂತರಿಕ ಶಕ್ತಿ ಲಿಖಿತರೂಪದಲ್ಲಿ ಪ್ರಕಟಗೊಂಡಾಗ ಅವರ ಹೆಸರು ಶಾಶ್ವತವಾಗುತ್ತದೆ. ಹಿರಿಯರ ಹೆಸರನ್ನು ಶಾಶ್ವತಗೊಳಿಸುವ ನಿಟ್ಟಿನಲ್ಲಿ ಅವರ ಮಕ್ಕಳು ಕೈಗೊಂಡ ಕಾರ್ಯ ಶ್ಲಾಘನೀಯವಾಗಿದೆ. ಹಿರಿಯ ಕವಿಗಳ ಪ್ರಭಾವ ಇವರ ಕವಿತೆಗಳಲ್ಲಿ ವ್ಯಕ್ತವಾಗುತ್ತದೆ. ಯುವಕ ಯುವತಿಯರನ್ನು ಬಹಿರಂಗವಾಗಿ ಆಕರ್ಷಿಸುವ ಸವಿನೆನಪಿನ ಸುಂದರ ಪುಷ್ಪಗಳ `ಕೆಂದಾವರೆ'ಯಾಗಿದೆ ಎಂದರು.
ನಿವೃತ್ತ ಪ್ರಾಧ್ಯಾಪಕ ಪುಂಡೂರು ಪುರುಷೋತ್ತಮ ಪುಣಿಂಚತ್ತಾಯ ನುಡಿನಮನ ಸಲ್ಲಿಸುತ್ತಾ ಅಗಾಧ ಪಾಂಡಿತ್ಯ, ಗುಟ್ಟಿನಲ್ಲಿ ಗಳಿಸಿದ ಅಸಾಮಾನ್ಯ ಜ್ಞಾನ ಸಂಪಾದನೆ ಅವರಲ್ಲಿತ್ತು. ದೊಡ್ಡ ಕವಿಯಾಗಬೇಕು ಎನ್ನುವ ಅಭಿಲಾಷೆಯಿದ್ದರೂ ತನ್ನಿಂದ ಅಸಾಧ್ಯ ಎಂಬ ಆತಂಕವೂ ಅವರಲ್ಲಿತ್ತು. ಪಿತೃಋಣ ಎಂಬುದನ್ನು ತೀರಿಸುವುದು ಕಷ್ಟಸಾಧ್ಯ. ಅವರು ನಶ್ವರರಾದರೂ ಅವರ ಪದ್ಯಗಳು, ಹೆಸರು ಶಾಶ್ವತವಾಗಿರುವಂತೆ ಮಕ್ಕಳು ಮುನ್ನಡೆದಿದ್ದಾರೆ ಎಂದರು.
ಹಿರಿಯರಾದ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಮಾತನಾಡಿ, ಈಶ್ವರ ಭಟ್ಟರ ಮಾತಿನಲ್ಲಿಯೇ ಅವರ ಅಧ್ಯಯನದ ಚಿಂತನೆ ಪ್ರಕಟವಾಗುತ್ತಿತ್ತು. ಹಾಸ್ಯ, ವಿನೋದದ ಸ್ವಭಾವದ ಅವರು ಕವಿಗಳಾಗಿದ್ದರು ಎಂಬುದು ತಡವಾಗಿ ಬೆಳಕಿಗೆ ಬಂತು. ದಿವ್ಯ ಚಕ್ಷುವನ್ನು ಪಡೆದ ಈಶ್ವರ ಭಟ್ಟರು ಕೊನೆಯ ದಿನದವರೆಗೂ ಸ್ಮರಣಶಕ್ತಿಯನ್ನು ಹೊಂದಿದ್ದರು ಎಂದರು.
ರಾಜಾರಾಮ ಪೆರ್ಲ ಮಾತನಾಡಿ, ಪುಸ್ತಕದ ಮೂಲಕ ಪಿತೃಋಣವನ್ನು ಸಂದಾಯ ಮಾಡಲು ತಂದೆಯ ಹೆಸರನ್ನು ಶಾಶ್ವತಗೊಳಿಸಿದ್ದಾರೆ. ಅಮೂಲ್ಯವಾದ ಕೃತಿ ಸತ್ವ ಇರುವುದು ಸತ್ಯವಾಗಿ ಹೊರಹೊಮ್ಮಿದೆ. ಇವರ ಎಲ್ಲಾ ಕವಿತೆಗಳು ಒಳ್ಳೆಯ ವಿಚಾರಗಳಿಗೆ ಪೂರಕವಾಗಿದೆ. ಇವರ ಹಾಡುಗಳು ರಾಗಸಂಯೋಜನೆಯೊಂದಿಗೆ ಹೊರಬರಬೇಕು. ಹವ್ಯಾಸಿ ಪತ್ರಕರ್ತ ಚಂದ್ರಶೇಖರ ಏತಡ್ಕ ಮಾತನಾಡಿ, ಸೂಕ್ತಕಾಲದಲ್ಲಿ ಸೂಕ್ತಬೆಂಬಲ ಸಿಗದೆ 75 ವರ್ಷಗಳ ಕಾಲ ಸಾಹಿತ್ಯವು ಅಗೋಚರವಾಗಿತ್ತು ಎಂದರು. ಈ ಸಂದರ್ಭದಲ್ಲಿ ಡಾ. ಸದಾಶಿವ ಭಟ್ ನಿಡ್ಪಳ್ಳಿ ಅವರನ್ನು ಕುರುಮುಜ್ಜಿ ರಾಜಗೋಪಾಲ ಹಾಗೂ ಮನೆಯವರು ಶಾಲು ಹೊದೆಸಿ ಸ್ಮರಣಿಕೆಯನ್ನು ನೀಡಿ ಸನ್ಮಾನಿಸಿದರು. ಅರವಿಂದ ಪ್ರಾರ್ಥನೆ ಹಾಡಿದರು. ರಾಧಾಕೃಷ್ಣ ಭಟ್ ಕುರುಮುಜ್ಜಿ ಸ್ವಾಗತಿಸಿ, ಶ್ರೀವತ್ಸ ಕಾರ್ಯಕ್ರಮ ನಿರೂಪಿಸಿದರು. ಪಾಂಡುರಂಗ ಭಟ್ ವಂದಿಸಿದರು.




.jpg)
