ಕಾಸರಗೋಡು: ಮುಳಿಯಾರು ಪಂಚಾಯಿತಿಯ ಇರಿಯಣ್ಣಿಯಲ್ಲಿ ಗೂಡಿನಲ್ಲಿ ಕೂಡಿಹಾಕಲಾಗಿದ್ದ ಜರ್ಮನ್ ಶೆಫರ್ಡ್ ತಳಿಯ ಸಾಕು ನಾಯಿಯನ್ನು ಚಿರತೆ ಹೊತ್ತೊಯ್ದಿದೆ.ಇರಿಯಣ್ಣಿ ಓಲತ್ತುಕಯ ನಿವಾಸಿ ಗೋಪಾಲನ್ ನಾಯರ್ ಎಂಬವರ ನಾಲ್ಕು ವರ್ಷ ಪ್ರಾಯದ ಈ ಶ್ವಾನ ಚಿರತೆಗೆ ಆಹಾರವಾಗಿದೆ. ಬುಧವಾರ ನಸುಕಿಗೆ ಮನೆ ಅಂಗಳಕ್ಕೆಲಾಗಮಿಸಿದ್ದ ಚಿರತೆ, ನಾಯಿಯನ್ನು ಕೂಡಿಹಾಕಲಾಗಿದ್ದ ಗೂಡಿನ ತಳಭಾಗದ ಮರದ ಹಲಿಗೆಯನ್ನು ಕೆಡವಿ ನಾಯಿಯನ್ನು ಸೆರೆಹಿಡಿದಿದೆ. ಚಿರತೆ ಹಿಡಿತದಿಂದ ನುಣುಚಿ ಮನೆ ಸಿಟೌಟ್‍ಗೆ ಧಾವಿಸಿದ್ದ ನಾಯಿಯನ್ನು ಹಿಂಬಾಲಿಸಿ ಸೆರೆಹಿಡಿದಿರುವುದು ನಾಯಿ ಹಾಗೂ ಚಿರತೆಯ ಪಂಜದ ಗುರುತಿನಿಂದ ಪತ್ತೆಯಾಗಿದೆ. ನಾಯಿಯನ್ನು ಕೊಂದು, ಅಡಕೆ ತೋಟದ ಮೂಲಕ ಚಿರತೆ ಹೊತ್ತೊಯ್ದಿದೆ.
ಅರಣ್ಯ ಇಲಾಖೆಯ ಆರ್‍ಆರ್‍ಟಿ ತಂಡ ಸ್ಥಳಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿದ್ದು, ಚಿರತೆ ಸಂಚಾರವನ್ನು ಖಚಿತಪಡಿಸಿದ್ದಾರೆ. ಕೆಲವು ಸಮಯದ ಹಿಂದೆ ಓಲತ್ತುಕಯದ ಇನ್ನೊಂದು ಮನೆಗೂ ಚಿರತೆ ಆಗಮಿಸಿದ್ದು, ಗೂಡಿನಿಂದ ನಾಯಿಯನ್ನು ಸೆರೆಹಿಡಿಯಲು ಯತ್ನಿಸಿತ್ತು. ಈ ಪ್ರದೇಶದಲ್ಲಿ ಸಿ.ಸಿ ಕ್ಯಾಮರಾ ಅಳವಡಿಸಲು ಅರಣ್ಯ ಇಲಾಖೆ ಅಧಿಕಾರಿಗಳು ತೀರ್ಮಾನಿಸಿದ್ದಾರೆ.




