ಕಾಸರಗೋಡು: ಪೆರಿಯ ಅವಳಿ ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದ ಸಿಪಿಎಂ ನೇತಾರ, ಕಾಞಂಗಾಡು ಬ್ಲಾಕ್ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ. ಮಣಿಕಂಠನ್ ಅವರನ್ನು ರಾಜ್ಯ ಚುನಾವಣಾ ಆಯೋಗ ಸದಸ್ಯತ್ವವನ್ನು ಅನರ್ಹಗೊಳಿಸಿದೆ. ಬ್ಲಾಕ್ ಪಂಚಾಯಿತಿ ಸದಸ್ಯತ್ವದಿಂದ ಮಣಿಕಂಠನ್ ಅವರನ್ನು ಅನರ್ಹಗೊಳಿಸುವಂತೆ ಕಾಂಗ್ರೆಸ್ ಮುಖಂಡ, ವಕೀಲ ಎಂ.ಕೆ ಬಾಬುರಾಜ್ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಮಣಿಕಂಠನ್ ಅವರು ಸಿಪಿಎಂ ಕಾಸರಗೋಡು ಜಿಲ್ಲಾ ಸಮಿತಿ ಸದಸ್ಯರಾಗಿದ್ದಾರೆ.
ಕಾಞಂಗಾಡು ಬ್ಲಾಕ್ ಪಮಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಮಣಿಕಂಠನ್ ಅವರು ಇತ್ತೀಚೆಗೆ ರಾಜೀನಾಮೆ ಸಲ್ಲಿಸಿದ್ದರು. ರಾಜ್ಯವನ್ನು ನಡುಗಿಸಿದ್ದ ಪೆರಿಯ ಅವಳಿ ಕೊಲೆ ಪ್ರಕರಣದಲ್ಲಿ 14ನೇ ಆರೋಪಿಯಾಗಿರುವ ಕೆ. ಮಣಿಕಂಠನ್ ಅವರಿಗೆ ಕೆಳ ನ್ಯಾಯಾಲಯ ವಿಧಿಸಿದ್ದ ಐದು ವರ್ಷಗಳ ಶಿಕ್ಷೆಯನ್ನು ಹೈಕೋರ್ಟು ರದ್ದುಪಡಿಸಿದ ಹಿನ್ನೆಲೆಯಲ್ಲಿ ಜಾಮೀನು ಮಂಜೂರಾಗಿತ್ತು. ರಾಜ್ಯ ಚುನಾವಣಾ ಆಯೋಗದ ಆದೇಶದಿಂದ ಮಣಿಕಂಠನ್ ಅವರಿಗೆ ಮುಂದಿನ ಆರು ವರ್ಷಗಳ ವರೆಗೆ ಚುನಾವಣೆಗೆ ಸ್ಪರ್ಧಿಸುವುದು ಅಸಾಧ್ಯವಾಗಲಿದೆ. 2019 ಫೆ. 17ರಂದು ಕಾಂಗ್ರೆಸ್ ಕಾರ್ಯಕರ್ತರಾಗಿದ್ದ ಕೃಪೇಶ್ ಹಾಗೂ ಶರತ್‍ಲಾಲ್ ಅವರನ್ನು ತಂಡವೊಂದು ಬರ್ಬರವಾಗಿ ಕೊಲೆಗೈದಿತ್ತು.





