ಕಾಸರಗೋಡು: ಜಿಲ್ಲೆಯ ಮಂಜೇಶ್ವರ ತಾಲ್ಲೂಕಿನ ಉಪ್ಪಳ ಹಾಗೂ ಆಸುಪಾಸಿನ ಕರಾವಳಿ ಪ್ರದೇಶದಲ್ಲಿ ಉಂಟಾಗಿರುವ ಸಮುದ್ರ ಕೊರೆತಕ್ಕೆ ತಕ್ಷಣ ಪರಿಹಾರ ಕಲ್ಪಿಸುವಂತೆ ಸಿಪಿಎಂ ಮಂಜೇಶ್ವರ ಏರಿಯಾ ಸಮಿತಿ ಪದಾಧಿಕಾರಿಗಳು ರಾಜ್ಯ ಮೀನುಗಾರಿಕೆ ಮತ್ತು ಬಂದರು ಖಾತೆ ಸಚಿವ ಸಜಿ ಚೆರಿಯನ್ ಅವರನ್ನು ತಿರುವನಂತಪುರದಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದರು.
ಉಪ್ಪಳ ಅಸುಪಸಿನ ಕರಾವಳಿ ಪ್ರದೇಶಗಳಾದ ಶಾರದಾ ನಗರ, ಮಣಿಮುಂಡ ಕಡಪ್ಪುರಂ, ಹನುಮಾನ್ ನಗರ, ಬಾಂಗ್ಲಾ, ಶಾರದಾ ಮಂದಿರ ಸನಿಹದ ಪ್ರದೇಶ, ಐಲ ಹನುಮಾನ್ ನಗರ ಮತ್ತು ಕುದುಪುಲು ಪ್ರದೇಶದಲ್ಲಿ ಸಮುದ್ರ ಕೊರೆಎತದಿಂದ ಭಾರೀ ಹಾಣಿ ಸಂಭವಿಸಿದೆ. ಶಾರದಾ ನಗರದಲ್ಲಿ ನಿರ್ಮಿಸಲಾಗಿದ್ದ ತಡೆಗೋಡೆ ಸಂಪೂರ್ಣ ಕುಸಿದಿವೆ. ಶಾರದಾ ನಗರ, ಮಣಿಮುಂಡ ಕಡಪ್ಪುರಂ ಪಿಡಬ್ಲ್ಯು ಮತ್ತು ನಬಾರ್ಡ್ ರಸ್ತೆಗಳು ಸಮುದ್ರಪಾಲಾಗಿದೆ.ಈ ಪ್ರದೇಶದ ಹಲವಾರು ಕುಟುಂಬಗಳು ಸಂಕಷ್ಟ ಅನುಭವಿಸುತ್ತಿದೆ. ತಕ್ಷಣಕ್ಕೆ ತಾತ್ಕಾಲಿಕ ಪರಿಹಾರದ ಜತೆಗೆ ಶಾಶ್ವತ ತಡೆಗೋಡೆ ನಿರ್ಮಾಣಕ್ಕೆ ಸರ್ಕಾರ ಮುಂದಾಗಬೇಕು ಎಂದು ಸಿಪಿಐ(ಎಂ) ಕಾಸರಗೋಡು ಜಿಲ್ಲಾ ಕಾರ್ಯಕಾರಿ ಸದಸ್ಯ ಕೆ. ಆರ್. ಜಯಾನಂದ ಅವರು ಸಚಿವರನ್ನು ಆಗ್ರಹಿಸಿದ್ದಾರೆ. ತಕ್ಷಣಕ್ಕೆ ಸ್ಪಂದಿಸಿದ ಸಚಿವರು, ಮುಖ್ಯ ಎಂಜಿನಿಯರ್ ಅನ್ಸಾರಿ ಅವರನ್ನು ಘಟನೆ ಸ್ಥಳಕ್ಕೆ ಭೇಟಿ ನೀಡಲು ಸೂಚಿಸಿದ್ದು, ಅಲ್ಲಿ ಉಂಟಾದ ಹಾನಿಗೆ ಅಗತ್ಯ ಪರಿಹಾರ ಕಂಡುಕೊಳ್ಳಲು ಮಧ್ಯಪ್ರವೇಶಿಸುವುದಾಗಿ ಸಚಿವರು ಭರವಸೆ ನಿಡಿರುವುದಾಗಿ ಕೆ.ಆರ್ ಜಯಾನಂದ ತಿಳಿಸಿದ್ದಾರೆ.





