HEALTH TIPS

ಪದವಿ ವಿವರ ಮುಚ್ಚಿಡಲು ಬಯಸುವ ದೇಶದ ಮೊದಲ ಪ್ರಧಾನಿ; ಮಾಹಿತಿ ಹಕ್ಕು ವಿರೋಧಿಸಿದ್ದು ಇದಕ್ಕೆನಾ? ಕಾಂಗ್ರೆಸ್‌ ಪ್ರಶ್ನೆ!

ನವದೆಹಲಿ: "ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪದವಿ ಪ್ರಮಾಣಪತ್ರಗಳನ್ನು ಬಹಿರಂಗಪಡಿಸುವ ಅಗತ್ಯವಿಲ್ಲ" ಎಂಬ ದೆಹಲಿ ಹೈಕೋರ್ಟ್‌ ಆದೇಶಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರತಿಪಕ್ಷ ಕಾಂಗ್ರೆಸ್‌, "ನರೇಂದ್ರ ಮೋದಿ ಅವರು ತಮ್ಮ ಪದವಿ ವಿವರಗಳನ್ನು ಮುಚ್ಚಿಡಲು ನ್ಯಾಯಾಲಯದ ಮೊರೆ ಹೋದ ದೇಶದ ಮೊದಲ ಪ್ರಧಾನಮಂತ್ರಿ" ಎಂದು ವ್ಯಂಗ್ಯವಾಡಿದೆ.
ಈ ಕುರಿತು ತಮ್ಮ ಅಧಿಕೃತ ಎಕ್ಸ್‌ ಅಕೌಂಟ್‌ನಲ್ಲಿ ಪೋಸ್ಟ್‌ ಮಾಡಿರುವ ಕಾಂಗ್ರೆಸ್‌ ರಾಷ್ಟ್ರೀಯ ಸಂವಹನ ಉಸ್ತುವಾರಿ ಜೈರಾಮ್‌ ರಮೇಶ್‌, "2005ರಲ್ಲಿ ಅಂದಿನ ಯುಪಿಎ ಸರ್ಕಾರ ಜಾರಿಗೆ ತಂದಿದ್ದ ಮಾಹಿತಿ ಹಕ್ಕು ಕಾಯ್ದೆ(ಆರ್‌ಟಿಐ)ಯನ್ನು ಬಿಜೆಪಿ ವಿರೋಧಿಸಲು ಇದೇ ಕಾರಣವಿರಬೇಕು" ಎಂದು ಕುಹುಕವಾಡಿದ್ದಾರೆ.

"ಸಾಮಾನ್ಯವಾಗಿ ಎಲ್ಲರ ಪದವಿ ವಿವರಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಲಾಗುತ್ತದೆ. ಜನಪ್ರತಿನಿಧಿಗಳ ಪದವಿ ವಿವರಗಳು ಸಾರ್ವಜನಿಕವಾಗಿ ಲಭ್ಯವಿರುತ್ತವೆ. ಆದರೆ ಈ ನಿರ್ದಿಷ್ಟ ಪ್ರಧಾನಿಯ ಪದವಿ ವಿವರಗಳನ್ನು ಏಕೆ ರಹಸ್ಯವಾಗಿಡಬೇಕು ಎಂಬುದು ಅರ್ಥವಾಗುತ್ತಿಲ್ಲ?" ಎಂದು ಜೈರಾಮ್‌ ರಮೇಶ್‌ ತಮ್ಮ ಎಕ್ಸ್‌ ಪೋಸ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. ದೆಹಲಿ ವಿಶ್ವವಿದ್ಯಾಲಯವು 2016ರಲ್ಲೇ ಈ ಕುರಿತು ಪ್ರಧಾನಿ ಮೋದಿ ಅವರ ಪದವಿ ಪ್ರಮಾಣಪತ್ರ ಅಸಲಿ ಎಂದು ಹೇಳಿತ್ತು.
ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಆರು ವರ್ಷಗಳ ಹಿಂದೆ ನಮ್ಮ ದೃಢ ವಿರೋಧದ ನಡುವೆಯೂ "ಆರ್‌ಟಿಐ ಕಾಯ್ದೆ 2005ರ ತಿದ್ದುಪಡಿಗಳನ್ನು ಸಂಸತ್ತಿನಲ್ಲಿ ಬುಲ್ಡೋಜರ್ ಮೂಲಕ ತಳ್ಳಿಹಾಕಿತು.ಬಹುಶಃ ಪ್ರಧಾನಿ ಮೋದಿ ಅವರ ಪದವಿ ಪ್ರಮಾಣಪತ್ರಗಳು ಬಹಿರಂಗವಾಗಬಾರದು ಎಂಬ ಕಾರಣಕ್ಕೆ ಆರ್‌ಟಿಐ ಕಾಯ್ದೆಯನ್ನು ಬಿಜೆಪಿ ವಿರೋಧಿಸುತ್ತಿದೆ" ಎಂದು ಜೈರಾಮ್‌ ರಮೇಶ್‌ ವ್ಯಂಗ್ಯಭರಿತ ಧಾಟಿಯಲ್ಲಿ ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ದೆಹಲಿ ಹೈಕೋರ್ಟ್‌ ಹೇಳಿದ್ದೇನು?

ಪ್ರಧಾನಿ ಮೋದಿ ಅವರ ಪದವಿ ಪ್ರಮಾಣ ಪತ್ರಗಳನ್ನು ಬಹಿರಂಗಪಡಿಸಬೇಕು ಎಂದು ದೆಹಲಿ ವಿಶ್ವವಿದ್ಯಾಲಯಕ್ಕೆ ಕೇಂದ್ರ ಮಾಹಿತಿ ಆಯೋಗ ಸೂಚಿಸಿತ್ತು. ಆದರೆ ದೆಹಲಿ ವಿವಿ ಈ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ ಮೊರೆ ಹೋಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್‌ ನ್ಯಾಯಾಧೀಶ ಸಚಿನ್‌ ದತ್ತಾ, ದೆಹಲಿ ವಿಶ್ವವಿದ್ಯಾಲಯದ ಮನವಿಯನ್ನು ಪುರಸ್ಕರಿಸಿದರು.

"ಪ್ರಧಾನಿ ಮೋದಿ ಅವರ ಪದವಿ ಪ್ರಮಾಣಪತ್ರಗಳ ಬಗ್ಗೆ ದೆಹಲಿ ವಿಶ್ವವಿದ್ಯಾಲಯ ಯಾವುದೇ ಮಾಹಿತಿ ನೀಡುವ ಅಗತ್ಯವಿಲ್ಲ" ಎಂದು ಹೇಳಿರುವ ದೆಹಲಿ ಹೈಕೋರ್ಟ್‌, ಈ ವಿಚಾರವಾಗಿ ಕೇಂದ್ರ ಮಾಹಿತಿ ಆಯೋಗ ಹೊಡಿಸಿದ್ದ ಆದೇಶವನ್ನು ರದ್ದು ಮಾಡಿದೆ. 2016ರಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಪ್ರಧಾನಿ ಮೋದಿ ಅವರ ಪದವಿ ಪ್ರಮಾಣಪತ್ರಗಳ ಪ್ರದರ್ಶನ ಮಾಡಿದ್ದರು.

2016ರಲ್ಲಿ ಕೇಂದ್ರ ಮಾಹಿತಿ ಆಯೋಗವು ದೆಹಲಿ ವಿಶ್ವವಿದ್ಯಾಲದಯ 1978 ರಲ್ಲಿ ಬಿಎ ಪರೀಕ್ಷೆ ಪಾಸಾದ ಎಲ್ಲ ವಿದ್ಯಾರ್ಥಿಗಳ ದಾಖಲೆಗಳನ್ನು ಒದಿಗುಸುವಂತೆ ದೆಹಲಿ ವಿಶ್ವವಿದ್ಯಾಲಯವನ್ನು ಕೋರಿಕೊಂಡಿತ್ತು. ಪ್ರಧಾನಿ ಮೋದಿ ಕೂಡ ಅದೇ ವರ್ಷ ಬಿಎ ಪರೀಕ್ಷೆ ಪಾಸಾಗಿದ್ದಾರೆ ಎಂದು ಹೇಳಲಾಗಿದೆ.

ಆದರೆ ಈ ಮಾಹಿತಿಯನ್ನು ನ್ಯಾಯಾಲಯಕ್ಕೆ ನೀಡಲು ಸಿದ್ಧ ಎಂದು ಹೇಳಿದ್ದ ದೆಹಲಿ ವಿಶ್ವವಿದ್ಯಾಲಯ, ಮಾಹಿತಿ ಹಕ್ಕು ಕಾಯ್ದೆಯಡಿ ಸಾರ್ವಜನಿಕರು ಈ ದಾಖಲೆಗಳನ್ನು ಪರಿಶೀಲಿಸುವುದು ಸರಿಯಲ್ಲ ಎಂದು ವಾದಿಸಿತ್ತು. ಮಾಹಿತಿ ಹಕ್ಕಿಗಿಂತ ಖಾಸಗಿ ಹಕ್ಕು ಮುಖ್ಯ ಎಂಬ ದೆಹಲಿ ವಿಶ್ವವಿದ್ಯಾಲಯದ ವಾದವನ್ನು ದೆಹಲಿ ಹೈಕೋರ್ಟ್‌ ಪುರಸ್ಕರಿಸಿದ್ದು, ಪ್ರಧಾನಿ ಮೋದಿ ಪದವಿ ವಿವರ ನೀಡುವ ಅಗತ್ಯವಿಲ್ಲ ಎಂದು ಹೇಳಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries