ಪೆರ್ಲ: ಯುವಜನತೆಯಲ್ಲಿ ಕ್ರೀಡಾಮನೋಭಾವ ಬೆಳೆಸುವ ಹಾಗೂ ಆರೋಗ್ಯಪೂರ್ಣ ಸಮಾಜವನ್ನು ನಿರ್ಮಿಸುವ ನಿಟ್ಟಿನಲ್ಲಿ ಸರ್ಕಾರದ ಪಂಚಾಯಿತಿಗೊಂದು ಕ್ರೀಡಾಂಗಣ ಎಂಬ ಯೋಜನೆ ಕ್ರೀಡಾವಲಯದಲ್ಲಿ ಮಹತ್ವದ ಬದಲಾವಣೆಗೆ ಹಾದಿಮಾಡಿಕೊಟ್ಟಿರುವುದಾಗಿ ರಾಜ್ಯ ಕ್ರೀಡಾ ಹಾಗೂ ವಕ್ಫ್ ಖಾತೆ ಸಚಿವ ವಿ. ಅಬ್ದುಲ್ ರಹಮಾಣ್ ತಿಳಿಸಿದ್ದಾರೆ.
ಅವರು ಗುರುವಾರ ಮಂಜೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಣ್ಮಕಜೆ ಪಂಚಾಯಿತಿ ಸಭಾಂಗಣದಲ್ಲಿ ಬಜಕೂಡ್ಲು ಮಿನಿ ಸ್ಟೇಡಿಯಂ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಮೀಸಲಿರಿಸಿರುವ ಕೋಟಿ ಮೊತ್ತದ ನವೀಕರಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಕೇರಳದ ಎಡರಂಗ ಸರ್ಕಾರ ಅಧಿಕಾರಕ್ಕೇರಿದ ನಂತರ ಇದುವರೆಗೆ ಕ್ರೀಡಾ ವಲಯದ ಅಭಿವೃದ್ಧೀಗೆ 350ಕೋಟಿಗೂ ಹೆಚ್ಚಿನ ಮೊತ್ತ ವಿನಿಯೋಗಿಸಿದೆ. ಪಂಚಾಯಿತಿಗೆ ಒಂದು ಕ್ರೀಡಾಂಗಣ ಯೋಜನೆಯನ್ವಯ ಒಂದರಿಂದ ಐದು ಕೋಟಿ ರೂ. ವರೆಗಿನ ವೆಚ್ಚದಲ್ಲಿ ಪಂಚಾಯಿತಿಗಳಿಗೆ ಕ್ರೀಡಾಂಗಣ ನಿರ್ಮಿಸಿಕೊಡಲಾಗುತ್ತಿದೆ. ಯುವ ಜನತೆ ಮತ್ತು ವಿದ್ಯಾರ್ಥಿಗಳಲ್ಲಿ ಕ್ರೀಡಾ ಕ್ಷಮತೆ ಹೆಚ್ಚಿಸುವ ನಿಟ್ಟಿನಲ್ಲಿ 80ಕೋಟಿ ರೂ. ಮೊತ್ತದ ಪ್ರತ್ಯೇಕ ಫಂಡ್ ಮೀಸಲಿರಿಸಿದೆ. ಹೆಚ್ಚಿನ ಜನರನ್ನು ಕ್ರೀಡೆಯತ್ತ ಆಕರ್ಷಿಸಲು ಸರ್ಕಾರ ಪೂರಕ ಯೋಜನೆಗಳನ್ನು ತಯಾರಿಸುತ್ತಿದೆ. ಪ್ರತಿ ಪಂಚಾಯಿತಿಯಲ್ಲಿ ಕ್ರೀಡಾ ತರಬೇತುದಾರರನ್ನು ನಿಯೋಜಿಸುವ ಯೋಜನೆ ಇಲಾಖೆ ಮುಂದಿದೆ. ಕ್ರೀಡಾ ವಲಯದಲ್ಲಿ ಕಾಸರಗೋಡಿನ ಅವಗಣನೆಯನ್ನು ನಿವಾರಿಸುವಲ್ಲಿ ಎಡರಂಗ ಸರ್ಕಾರ ಶ್ರಮಿಸುತ್ತಿದ್ದು, ಇದರಲ್ಲಿ ಮಹತ್ವದ ಸಾಧನೆ ಸಾಧ್ಯವಾಗಿದೆ ಎಂದು ತಿಳಿಸಿದರು.
ಕೇರಳ ಸರ್ಕಾರದ ಬಜೆಟ್‍ನಲ್ಲಿ ಎಣ್ಮಕಜೆ ಪಂಚಾಯಿತಿಯ ಬಜಕುಡ್ಲು ಸ್ಟೇಡಿಯಂ ಅಭಿವೃದ್ಧಿಗೆ ಒಂದು ಕೋಟಿ ರೂ.. ಮೊತ್ತ ಮೀಸಲಿರಿಸಲಾಗಿತ್ತು. ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಎಣ್ಮಕಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಜೆ.ಎಸ್ ಸೋಮಶೇಖರ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಸರ್ಕಲ್ ಸಹಕಾರಿ ಬ್ಯಾಂಕ್ ನಿರ್ದೇಶಕ ಕೆ.ಆರ್ ಜಯಾನಂದ, ಗ್ರಾಪಂ ಉಪಾಧ್ಯಕ್ಷೆ ರಮ್ಲಾಇಬ್ರಾಹಿಂ, ಗ್ರಾಪಂ ಸ್ಥಾಯೀ ಸಮಿತಿ ಅಧ್ಯಕ್ಷರು, ಪಂಚಾಯಿತಿ ಸದಸ್ಯರು, ಇತರ ಜನ ಪ್ರತಿನಿಧೀಗಳು ಉಪಸ್ಥಿತರಿದ್ದರು. ಈ ಸಂದರ್ಭ ಸಂಪೂರ್ಣ ಡಿಜಿಟಲ್ ಸಾಕ್ಷರತಾ ಯೋಜನೆಯ ಪಂಚಾಯಿತಿ ಮಟ್ಟದ ಉದ್ಘಾಟನೆಯನ್ನು ಸಚಿವ ವಿ. ಅಬ್ದುಲ್ ರಹಮಾನ್ ನಿರ್ವಹಿಸಿದರು.





