ನವದೆಹಲಿ: 'ಗಾಜಾದಲ್ಲಿ ಇಸ್ರೇಲ್ 'ನರಮೇಧ' ನಡೆಸುತ್ತಿದೆ. ಇಸ್ರೇಲ್‌ನಿಂದ ಇಂತಹ ವಿನಾಶಕಾರಿ ದಾಳಿ ನಡೆಯುತ್ತಿದ್ದರೂ ಭಾರತ ಸರ್ಕಾರ ಮೌನ ವಹಿಸುತ್ತಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪಿಸಿದ್ದಾರೆ.
'ಇಸ್ರೇಲ್ ಈವರೆಗೆ 60 ಸಾವಿರ ಜನರನ್ನು ಹತ್ಯೆಗೈದಿದ್ದು, ಇದರಲ್ಲಿ 18,430 ಮಕ್ಕಳು ಸೇರಿದ್ದಾರೆ' ಎಂದು ಅವರು ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಪ್ರಿಯಾಂಕಾ, 'ಅನೇಕ ಮಕ್ಕಳನ್ನು ಸೇರಿದಂತೆ ಸಾವಿರಾರು ಜನರು ಹಸಿವಿನಿಂದ ಸಾವಿಗೀಡಾಗಿದ್ದಾರೆ. ಆದರೆ ಭಾರತ ಸರ್ಕಾರ ಮೌನ ವಹಿಸುತ್ತಿರುವುದು ನಾಚಿಕೆಗೇಡಿನ ಸಂಗತಿ' ಎಂದು ಆರೋಪಿಸಿದ್ದಾರೆ.
'ಇಸ್ರೇಲ್‌ಗೆ ಅಪರಾಧ ಎಸಗಲು ಮೌನ ಸಮ್ಮತಿ ನೀಡುವುದು ಸಹ ಅಪರಾಧವಾಗಿದೆ' ಎಂದು ಹೇಳಿದ್ದಾರೆ.
ಇಸ್ರೇಲ್ ನಡೆಸಿದ್ದ ದಾಳಿಯಲ್ಲಿ ಅಲ್ ಜಜೀರಾದ ಐವರು ಪತ್ರಕರ್ತರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಇದೊಂದು ಕ್ರೂರ ಕೃತ್ಯವಾಗಿದೆ ಎಂದು ಪ್ರಿಯಾಂಕಾ ಖಂಡಿಸಿದ್ದಾರೆ.




