ನವದೆಹಲಿ: ಮತ ಕಳ್ಳತನ ಆರೋಪಕ್ಕೆ ಸಂಬಂಧಿಸಿದಂತೆ ಇತ್ತೀಚೆಗಷ್ಟೇ ಅಣು ಬಾಂಬ್‌ನಂತಹ ಪುರಾವೆ ಇರುವುದಾಗಿ ಹೇಳಿಕೆ ನೀಡಿದ್ದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಈಗ ಮಗದೊಂದು ಹೇಳಿಕೆ ನೀಡಿದ್ದು, 'ಅಭಿ ಪಿಕ್ಚರ್ ಬಾಕಿ ಹೈ' (ಚಿತ್ರ ಇನ್ನೂ ಬಾಕಿ ಇದೆ) ಎಂದಿದ್ದಾರೆ.
ಮತದಾರರ ಪಟ್ಟಿಯಲ್ಲಿ ಅಕ್ರಮಗಳನ್ನು ಉಲ್ಲೇಖಿಸಿ ರಾಹುಲ್ ಈ ರೀತಿಯಾಗಿ ನುಡಿದ್ದಾರೆ.
ಚುನಾವಣಾ ಆಯೋಗದ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಕಾಂಗ್ರೆಸ್ ನಾಯಕ, 'ಒಬ್ಬ ವ್ಯಕ್ತಿ, ಒಂದು ಮತ' ಕರ್ತವ್ಯವನ್ನು ಆಯೋಗ ಪಾಲಿಸುತ್ತಿಲ್ಲ ಎಂದು ಟೀಕಿಸಿದ್ದಾರೆ.
'ಕೇವಲ ಒಂದು ಕ್ಷೇತ್ರದಲ್ಲಿ ಮಾತ್ರ ಮತ ಕಳ್ಳತನ ನಡೆದಿಲ್ಲ. ಹಲವಾರು ಕ್ಷೇತ್ರಗಳಲ್ಲಿ ಕಳವು ನಡೆದಿದೆ. ಇದನ್ನು ದೇಶೀಯ ಮಟ್ಟದಲ್ಲಿ ವ್ಯವಸ್ಥಿತವಾಗಿ ಮಾಡಲಾಗುತ್ತಿದೆ. ಚುನಾವಣಾ ಆಯೋಗಕ್ಕೂ ಈ ವಿಷಯ ಗೊತ್ತಿದೆ. ನಮಗೂ ಗೊತ್ತಿದೆ' ಎಂದಿದ್ದಾರೆ.
'ಮೊದಲು ಸಾಕ್ಷ್ಯಗಳು ಇರಲಿಲ್ಲ. ಆದರೆ ನಮ್ಮ ಬಳಿಯೀಗ ಪುರಾವೆಗಳಿವೆ. 'ಒಬ್ಬ ವ್ಯಕ್ತಿ, ಒಂದು ಮತ' ಸಂವಿಧಾನದ ಅಡಿಪಾಯವಾಗಿದೆ. ಹಾಗಾಗಿ ನಾವು ಸಂವಿಧಾನವನ್ನು ರಕ್ಷಿಸುತ್ತೇವೆ. ನಮ್ಮ ಹೋರಾಟ ಮುಂದುವರಿಯಲಿದೆ' ಎಂದು ಹೇಳಿದ್ದಾರೆ.
ಮತ ಕಳವು ಹಾಗೂ ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧ ವಿಪಕ್ಷಗಳ ನಾಯಕರು ಇಂದು (ಮಂಗಳವಾರ) ಕೂಡ ಪ್ರತಿಭಟನೆ ನಡೆಸಿದ್ದಾರೆ.




