HEALTH TIPS

ನೋಂದಾವಣಾ ಇಲಾಖೆಗೂ ಬೇಡವಾದ ಕನ್ನಡ ದಸ್ತಾವೇಜು: ದಾಖಲೆಗಳಿನ್ನು ಮಲಯಾಳಿಮಯ: ಕನ್ನಡಿಗರಿಗೆ ಮತ್ತೆ ಸಂಕಷ್ಟ

ಕಾಸರಗೋಡು: ಕೇರಳದಲ್ಲಿ ಮಲಯಾಳವನ್ನು ಆಡಳಿತ ಭಾಷೆಯಾಗಿ ರಾಜ್ಯಾದ್ಯಂತ ಕಡ್ಡಾಯಗೊಳಿಸುತ್ತಿರುವ ಸರ್ಕಾರದ ಧೋರಣೆಯಿಂದ ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತರು  ಪ್ರತಿ ದಿನ ಸಮಸ್ಯೆ ಎದುರಿಸುವಂತಾಗಿದೆ. ಅಚ್ಚಕನ್ನಡ ಪ್ರದೇಶವಾಗಿರುವ ಮಂಜೇಶ್ವರ ಹಾಗೂ ಕಾಸರಗೋಡು ತಾಲೂಕಿನ ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ಮಲಯಾಳಿ ಸಿಬ್ಬಂದಿಯ ನೇಮಕ, ಕನ್ನಡ ಮಾಧ್ಯಮಕ್ಕೆ ಮಲಯಾಳಿ ಶಿಕ್ಷಕರ ನೇಮಕದೊಂದಿಗೆ ಮಲಯಾಳ ಕಡ್ಡಾಯಗೊಳಿಸುವ ತನ್ನ ಪ್ರಯೋಗವನ್ನು ಮುಂದುವರಿಸುತ್ತಿರುವ ಮಧ್ಯೆ, ಪ್ರಸಕ್ತ ನೋಂದಾವಣಾ ಕಚೇರಿಯ ಮೇಲೂ ಸರ್ಕಾರ  ವಕ್ರದೃಷ್ಟಿ ಬೀರಲಾರಂಭಿಸಿದೆ.

ಒಂದು ಕಾಲದಲ್ಲಿ ಬದಿಯಡ್ಕದಿಂದ ತೊಡಗಿ ತ್ರಿಕ್ಕರಿಪುರದ ವರೆಗಿನ ಉಪ ನೋಂದಾವಣಾ ಕಚೇರಿಗಳಲ್ಲಿ ಕನ್ನಡದಲ್ಲಿದ್ದ ದಾಸ್ತಾವೇಜು ಬರಹಗಳು ಸರ್ಕಾರದ ಧೋರಣೆಯಿಂದ ಇನ್ನು ಮುಂದೆ ಸಂಪೂರ್ಣ ಮಲಯಾಳವಾಗಿ ಬದಲಾಗಲಿದೆ. ಮಾತ್ರವಲ್ಲ ಇನ್ನು ಮುಂದಕ್ಕೆ ಕನ್ನಡದಲ್ಲಿ ನೋಂದಾವಣೆ ನಡೆಸದಿರುವಂತೆಯೂ ಸರ್ಕಾರ ಸುತ್ತೋಲೆ ಹೊರಡಿಸಿದೆ. ಮಾತ್ರವಲ್ಲ ಕನ್ನಡವನ್ನು ಪ್ರತ್ಯೇಕವಾಗಿ ಹೆಸರಿಸದೆ, ಇತರ ಭಾಷೆಗಳಲ್ಲಿರುವ ದಾಸ್ತಾವೇಜು ಬರಹಗಳನ್ನು ಸಂಪೂರ್ಣ ಮಲಯಾಳಕ್ಕೆ ಭಾಷಾಂತರಿಸುವಂತೆಯೂ ಆದೇಶದಲ್ಲಿ ತಿಳಿಸಲಾಗಿದೆ. ಇದಕ್ಕಾಗಿ 'ಕೇರಳ ನೋಂದಾವಣಾ ಕಾಯ್ದೆ 1958'ಕ್ಕೆ ಕೆಲವೊಂದು ತಿದ್ದುಪಡಿಯನ್ನೂ ತರಲಾಗಿದೆ.  ಕಾಸರಗೋಡಿನಲ್ಲಿರುವ ಬಹುತೇಕ ಕನ್ನಡಿಗರಿಗೆ ಕನ್ನಡ ಹೊರತು ಬೇರೆ ಯಾವುದೇ ಭಾಷೆ ಬರೆಯಲು ಹಾಗೂ ಓದಲು ತಿಳಿಯದವರಾಗಿದ್ದಾರೆ. ತಾವು ಮಾರಾಟ ಮಾಡುವ ಅಥವಾ ಖರೀದಿಸುವ ಜಾಗದ ದಾಸ್ತಾವೇಜು ಕನ್ನಡ ಭಾಷೆಯಲ್ಲಿದ್ದರೆ, ಅದರ ಸಂಪೂರ್ಣ ಮಾಹಿತಿಯನ್ನು ಓದಿ ಅರ್ಥೈಸಿಕೊಳ್ಳಲು ಇಲ್ಲಿನ ಕನ್ನಡಿಗರಿಗೆ ಸಹಕಾರಿಯಾಗಿತ್ತು. ಇನ್ನು ಮಲಯಾಳದಲ್ಲಿ ದಾಸ್ತಾವೇಜು ಬರವಣಿಗೆ ಬಂದಲ್ಲಿ, ಇದಕ್ಕೂ ಮೂರನೇ ವ್ಯಕ್ತಿಯನ್ನು ಅವಲಂಬಿಸಬೇಕಾದ ಅನಿವಾರ್ಯ ಪರಿಸ್ಥಿತಿ ಸಿಲ್ಲಿನ ಕನ್ನಡಿಗರಿಗೆ ಬರಲಿದೆ. 


ಕಾದಿದೆ ಮತ್ತಷ್ಟು ಸಂಕಷ್ಟ:

ಈಗಾಗಲೇ ಭಾಷಾ ಅಲ್ಪಸಂಖ್ಯಾತ ಪ್ರದೇಶವಾಗಿರುವ ಕಾಸರಗೋಡಿನ ಕನ್ನಡ ಮಾಧ್ಯಮ ಶಾಲೆಗಳಿಗೆ ಮಲಯಾಳಿ ಶಿಕ್ಷಕರ ನೇಮಕವಾಗುತ್ತಲೇ ಹೋರಾಟದ ಹಾದಿ ಹಿಡಿದಿರುವ ಗಡಿನಾಡ ಕನ್ನಡಿಗರಿಗೆ ಮತ್ತೊಂದು ಹೊಡೆತ ಎದುರಾಗಿದೆ. ಇಂದು ನೋಂದಾವಣಾ ಇಲಾಖೆ ತನ್ನ ಕಾಯ್ದೆಗೆ ಕೆಲವೊಂದು ತಿದ್ದುಪಡಿ ತಂದುಕೊಳ್ಳುವ ಮೂಲಕ ಕನ್ನಡಿಗರರನ್ನು ದಮನಿಸಲು ಮುಂದಾಗಿದೆ. ಕನ್ನಡ ಪ್ರದೇಶದ ಸರ್ಕಾರಿ ಕಚೇರಿಗಳಲ್ಲಿ ಮಲಯಾಳ ಅಧಿಕಾರಿಗಳ ನೇಮಕಾತಿಯೊಂದಿಗೆ ಮಲಯಾಳ ಕಡ್ಡಾಯದ ಗುರಿಯನ್ನು ಸಾಧಿಸಿರುವ ಸರ್ಕಾರ, ಇದೀಗ ನೋಂದಾವಣಾ ಇಲಾಖೆಯನ್ನು ಬಳಸಿಕೊಂಡಿದೆ. ಗಡಿ ಪ್ರದೇಶದಲ್ಲಿರುವ ಕಾಸರಗೋಡಿನ ಕನ್ನಡಿಗರಿಗೆ ಹಲವು ಸಂದರ್ಭ ಕರ್ನಾಟಕದ ಗಡಿ ಜಿಲ್ಲೆಗಳನ್ನು ಆಶ್ರಯಿಸಿ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಇಲ್ಲಿ ಕೊಡುವ ದಾಖಲೆಗಳು ಸಂಪೂರ್ಣ ಮಲಯಾಳದಲ್ಲಿದ್ದರೆ, ಮತ್ತಷ್ಟು ಸಮಸ್ಯೆ ಎದುರಾಗುತ್ತದೆ ಎಂಬುದು ಇಲ್ಲಿನ ಕನ್ನಡಿಗರ ಅಳಲು. ದಾಸ್ತಾವೇಜು ಬರವಣಿಗೆ, ಎನ್‍ಕಂಬ್ರೆನ್ಸ್ ಸರ್ಟಿಫಿಕೇಟ್ ಸೇರಿದಂತೆ ನೋಂದಾವಣಾ ಇಲಾಖೆಯ ಬಹುತೇಕ ದಾಖಲೆಗಳು   ಇನ್ನುಮುಂದೆ ಮಲಯಾಳದಲ್ಲೇ ನಮ್ಮ ಕೈಸೇರಲಿದೆ.

ಹೋರಾಟ ಅನಿವಾರ್ಯ:

ಈಗಾಗಲೇ ಕನ್ನಡ ಮಾಧ್ಯಮಕ್ಕೆ ಮಲಯಾಳಿ ಶಿಕ್ಷಕರ ನೇಮಕಾತಿ ಹಾಗೂ ಕನ್ನಡ ಪ್ರದೇಶದ ಸರ್ಕಾರಿ ಕಚೇರಿಗಳಿಗೆ ಮಲಯಾಳಿ ನೌಕರರ ನೇಮಕಾತಿ ಸೇರಿದಂತೆ ಅಚ್ಚಗನ್ನಡ ಕಾಸರಗೋಡನ್ನು ಸಂಪೂರ್ಣ ಮಲಯಾಳೀಕರಣಗೊಳಿಸುವ ಸರ್ಕಾರದ ಧೋರಣೆ ವಿರುದ್ಧ ನಡೆಯುತ್ತಿರುವ ಹೋರಾಟದ ಜತೆಗೆ ನೋಂದಾವಣಾ ಕಚೇರಿಗಳಲ್ಲಿ ಕನ್ನಡ ಕೈಬಿಡುವ ಸರ್ಕಾರದ ಕ್ರಮದ ವಿರುದ್ಧ ಧ್ವನಿಯೆತ್ತಬೇಕಾಗಿದೆ. ಜಿಲ್ಲೆಯಲ್ಲಿ ಹಲವಾರು ಕನ್ನಡಪರ ಸಂಘಟನೆಗಳಿದ್ದು, ಸರ್ಕಾರದ ಕನ್ನಡವಿರುದ್ಧ ಧೋರಣೆಯನ್ನು ಪ್ರಬಲವಾಗಿ ಎದುರಿಸಬೇಕಾದ ಅನಿವಾರ್ಯತೆಯಿದೆ ಎಂಬುದಾಗಿ ನೋಂದಾವಣಾ ಇಲಾಖೆಯ ನಿವೃತ್ತ ಸಿಬ್ಬಂದಿಯೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಕೇರಳದ ಎಲ್ಲಾ ಶಾಲೆಗಳಲ್ಲಿ ಮಲಯಾಳವನ್ನು ಪ್ರಥಮ ಭಾಷೆಯನ್ನಾಗಿಸಿ ಕಡ್ಡಾಯಗೊಳಿಸುವ ಹಾಗೂ ಮಲಯಾಳ ಭಾಷಾ ಕಲಿಕೆಯನ್ನು ಹೇರುವ ಉದ್ದಶದೊಂದಿಗೆ ಈ ಹಿಂದಿನ ಊಮನ್‍ಚಾಂಡಿ ನೇತೃತ್ವದ ಐಕ್ಯರಂಗ ಸರ್ಕಾರದ ಆಡಳಿತಾವಧಿಯಲ್ಲಿ ಅಂಗೀಕಾರ ನೀಡಿದ್ದ ಮಲಯಾಳಂ ಭಾಷಾ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅನುಮತಿ ನಿರಾಕರಿಸಿದ್ದರು. ನೋಂದಾವಣಾ ಇಲಾಖೆಯಲ್ಲಿ ಕನ್ನಡ ಕೈಬಿಡುವ ವಿಚಾರದಲ್ಲೂ ಭಾಷಾ ಅಲ್ಪಸಂಖ್ಯಾತರಿಗಿರುವ ಸಂವಿಧಾನಾತ್ಮಕ ಹಕ್ಕುಗಳ ಸಂರಕ್ಷಣೆಗಾಗಿ ಮತ್ತೆ ರಾಷ್ಟ್ರಪತಿ ಮೊರೆಹೋಗಲು ಕನ್ನಡಪರ ಸಂಘಟನೆಗಳೆಲ್ಲವೂ ಒಟ್ಟಾಗಿ ಹೋರಾಡುವುದು ಅನಿವಾರ್ಯವಾಗಲಿದೆ. ಕಾಸರಗೋಡಿನ ಇದೇ ಸಮಸ್ಯೆಯನ್ನು ಇಡುಕ್ಕಿಯಲ್ಲಿ ಅಲ್ಲಿನ ತಮಿಳರೂ ಎದುರಿಸುತ್ತಿದ್ದಾರೆ. 

ಅಭಿಮತ:

ಗಡಿನಾಡು ಕಾಸರಗೋಡಿನ ಕನ್ನಡಿಗರು ಇಲ್ಲಿನ ಮೂಲ ನಿವಾಸಿಗಳೆಂಬುದನ್ನು ಮರೆತು ಸರ್ಕಾರ ಕೈಗೊಳ್ಳುವ ನಿರ್ಣಯಗಳು ಕನ್ನಡಿಗರಿಗೆ ಮಾರಕವಾಗುತ್ತಿದೆ.  ನೋಂದಾವಣಾ ಇಲಾಖೆ ಕನ್ನಡ ಕೈಬಿಟ್ಟಿರುವುದು ಸರಿಯಲ್ಲ. ಕಸರಗೋಡಿನ ಕನ್ನಡಿಗರ ಸಂವಿಧಾನಾತ್ಮಕ ಸವಲತ್ತು ಹಾಗೂ ಹಕ್ಕುಗಳ ಸಂರಕ್ಷಣೆಗೆ ಹೋರಾಟ ಅನಿವಾರ್ಯ. ಎಲ್ಲ ಕನ್ನಡಪರ ಸಂಘಟನೆಗಳು ಒಟ್ಟಾಗಿ ಧ್ವನಿಯೆತ್ತಿದಾಗ ನಮ್ಮ ಹೋರಾಟಕ್ಕೆ ಬಲ ಸಿಗಲಿದೆ.

ಡಾ. ಜಯಪ್ರಕಾಶ್ ನಾರಾಯಣ್ ತೊಟ್ಟೆತ್ತೋಡಿ, ಅಧ್ಯಕ್ಷ

ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ

ಕಾಸರಗೋಡು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries