ಬೀಜಿಂಗ್: ಬಹುಪಕ್ಷೀಯತೆಯನ್ನು ಎತ್ತಿಹಿಡಿಯುವಲ್ಲಿ ಚೀನಾದ ಪಾತ್ರ ಅತ್ಯಗತ್ಯವಾಗಿದೆ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಶನಿವಾರ ಹೇಳಿದ್ದಾರೆ.
ಚೀನಾದ ಉತ್ತರ ಬಂದರು ನಗರ ಟಿಯಾಂಜಿನ್ ನಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಘಟನೆ(ಎಸ್‍ಸಿಒ) ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಗುಟೆರಸ್, ಶೃಂಗಸಭೆಯ ನೇಪಥ್ಯದಲ್ಲಿ ಚೀನಾದ ಅಧ್ಯಕ್ಷ ಕ್ಸಿ ಜಿಂಪಿಂಗ್ ಅವರೊಂದಿಗೆ ಮಾತುಕತೆ ನಡೆಸಿದರು.
`ಬಹುಪಕ್ಷೀಯತೆಗೆ ಅಪಾಯ ಎದುರಾಗಿರುವ ಈ ಸಂದರ್ಭದಲ್ಲಿ ಚೀನಾದ ಬೆಂಬಲ ಅತೀ ಮುಖ್ಯವಾಗಿದೆ. ಕೆಲವೊಮ್ಮೆ ಅರ್ಥ ಮಾಡಿಕೊಳ್ಳಲು ಕಷ್ಟವಾಗಿರುವ ಹೊಸ ರೀತಿಯ ಕಾರ್ಯನೀತಿಯನ್ನು ನಾವು ನೋಡುತ್ತಿದ್ದೇವೆ. ಇದು ಕೆಲವೊಮ್ಮೆ ಗಂಭೀರ ರಾಜತಾಂತ್ರಿಕ ಪ್ರಯತ್ನಗಳ ಬದಲು ಪ್ರದರ್ಶನ(ಶೋ)ದಂತೆ ಕಾಣುತ್ತದೆ ಮತ್ತು ಇದರಲ್ಲಿ ವ್ಯವಹಾರ ಮತ್ತು ರಾಜಕೀಯ ಬೆರೆತು ಹೋಗಿರುತ್ತದೆ. ಬಹುಪಕ್ಷೀಯ ವ್ಯವಸ್ಥೆಗೆ ಚೀನಾದ ಪಾತ್ರವು ಆಧಾರ ಸ್ಥಂಭವಾಗಿರುತ್ತದೆ ಮತ್ತು ಈ ಶ್ಲಾಘನೀಯ ಪಾತ್ರಕ್ಕಾಗಿ ಅವರಿಗೆ ನಾವು ಕೃತಜ್ಞರಾಗಿರುತ್ತೇವೆ ಎಂದು ಗುಟೆರಸ್ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಕ್ಸಿ ಜಿಂಪಿಂಗ್ `ಚೀನಾ ಯಾವಾಗಲೂ ವಿಶ್ವಸಂಸ್ಥೆಗೆ ವಿಶ್ವಾಸಾರ್ಹ ಪಾಲುದಾರನಾಗಿರುತ್ತದೆ ಮತ್ತು ಸ್ಥಿರತೆ ಹಾಗೂ ಖಚಿತತೆಯನ್ನು ಒದಗಿಸುವುದನ್ನು ಮುಂದುವರಿಸುತ್ತದೆ' ಎಂದು ಹೇಳಿರುವುದಾಗಿ ವರದಿಯಾಗಿದೆ.




