HEALTH TIPS

ಬಣ್ಣದ ಮಹಾಲಿಂಗ ಸಂಸ್ಮರಣೆ: ಪ್ರಶಸ್ತಿ ಪ್ರದಾನ

ಕುಂಬಳೆ: ತೆಂಕುತಿಟ್ಟು ಯಕ್ಷಗಾನ ರಂಗದ ಮೇರು ಕಲಾವಿದ ಬಣ್ಣದ ಮಹಾಲಿಂಗ ಅವರ ಸಂಸ್ಮರಣೆ ಹಾಗೂ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಗುರುವಾರ ಸೀತಾಂಗೋಳಿ ಸಮೀಪದ ಪೆರ್ಣೆ ಸಾಯಿತನ್ವಿ ನಿವಾಸದಲ್ಲಿ ಬಹಳ ಅರ್ಥವತ್ತಾಗಿ ನಡೆಯಿತು.

ಆರಂಭದಲ್ಲಿ ಕಾರ್ಯಕ್ರಮವನ್ನು ಉದ್ಯಮಿ ಶಿವಶಂಕರ ಹಾಗೂ ಜಯಲಕ್ಷ್ಮೀ ಅವರು ದೀಪ ಪ್ರಜ್ವಲನೆಗೈದು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಯಕ್ಷಗಾನ ಕಲೆಯು ಜೀವನದಲ್ಲಿ ಧರ್ಮ, ನಂಬಿಕೆ, ಶಿಸ್ತು ಬೋಧನೆಯನ್ನು ನೀಡಿದೆ. ಇಂತಹ ಕಲೆಯನ್ನು ಪ್ರೋತಾಹಿಸುವ ಹಾಗೂ ಉಳಿಸುವ ಕೆಲಸ ಪ್ರತಿಯೊಬ್ಬರಿಂದ ಆಗಬೇಕು ಎಂದರು.

ಕಾರ್ಯಕ್ರಮದಲ್ಲಿ ಬಣ್ಣ ಮಹಾಲಿಂಗ ಯಕ್ಷಪ್ರತಿಷ್ಠಾನ ಅಧ್ಯಕ್ಷ ಗೋಪಾಲಕೃಷ್ಣ ಮಾಸ್ತರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬಣ್ಣದ ಮಹಾಲಿಂಗ ಸಂಸ್ಮರಣೆಯನ್ನು ಮಾಡಿದ ಹಿರಿಯ ಯಕ್ಷಗಾನ ಕಲಾವಿದ ಜಯಾನಂದ ಸಂಪಾಜೆ, ಬಣ್ಣದಜ್ಜ ಎಂದೇ ಖ್ಯಾತಿ ಹೊಂದಿರುವ ಯಕ್ಷಗಾನ ಮೇರು ಕಲಾವಿದ ಬಣ್ಣದ ಮಹಾಲಿಂಗ ಅವರ ಕಲೆಯೊಂದಿಗೆ ಉತ್ತಮ ಕೃಷಿಕರಾಗಿದ್ದರು. ಪ್ರತಿಯೊಂದೂ ವಿಷಯದಲ್ಲಿ ಅವರ ಕಾಳಜಿ, ಶಿಸ್ತು ಜೀವನದಲ್ಲಿ ಅಳವಡಿಸಿಕೊಂಡವರು. ಜೀವನದ ಕೊನೆಯ ತನವೂ ವೃದ್ಧಾಪ್ಯದಲ್ಲೂ ಯಕ್ಷಗಾನದ ತವಕ ಹೊಂದಿದ್ದರು. ಸಂಪಾಜೆಯಲ್ಲಿ ಅವರ ಒಡನಾಟ ಹಾಗೂ ಯಕ್ಷಗಾನದಲ್ಲಿನ ಅವರ ಸಾಧನೆಗಳ ಕುರಿತು ಹೇಳಿದರು.

ಈ ಸಂದರ್ಭದಲ್ಲಿ ಹಿರಿಯ ಬಣ್ಣದ ವೇಷಧಾರಿ ಸುರೇಶ್ ಕುಪ್ಪೆಪದವು ಹಾಗೂ ಹಿರಿಯ ಬಣ್ಣದ ವೇಷಧಾರಿ ಮಾಧವ ಪಾಟಾಳಿ ನೀರ್ಚಾಲು ಅವರಿಗೆ ಬಣ್ಣದ ಮಹಾಲಿಂಗ ಯಕ್ಷ ಪ್ರಶಸ್ತಿ ನೀಡಿ ಗೌರವಿಸಲಾಯಿತು.  ಕಲಾವಿದ ಹಾಗೂ ನಿವೃತ್ತ ಪ್ರಾಂಶುಪಾಲ ಯತೀಶ್ ಕುಮಾರ್ ರೈ ಅಭಿನಂದನಾ ಭಾಷಣ ಮಾಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಹಿರಿಯ ಸಾಹಿತಿ ಹಾಗೂ ಶ್ರೀ ಪೆರ್ಣೆ ಮುಚ್ಚಿಲೋಟ್ ಭಗವತೀ ಕ್ಷೇತ್ರದ ಯಜಮಾನ ಶ್ರೀಕೃಷ್ಣಯ್ಯ ಅನಂತಪುರ ಮಾತನಾಡಿ, ಹಲವು ವರ್ಷಗಳ ಸಾಧನೆಗಳ ಮೂಲಕ ಗುರುತಿಸಿಕೊಂಡ ಕಲಾವಿದರನ್ನು ನಾವು ನೆನಪಿಕೊಳ್ಳಬೇಕಾಗಿರುವುದು ಇಂತಹ ಸಂಸ್ಮರಣೆ ಮೂಲಕವಾಗಿದೆ. ಅವರು ಈ ಕಲೆಗೆ ನೀಡಿದ ಕೊಡುಗೆಯನ್ನು ಯಾವತ್ತೂ ಸ್ಮರಿಸಬೇಕಾಗಿರುವುದು ನಮ್ಮ ಕರ್ತವ್ಯವಾಗಿದೆ. ಅದ್ದರಿಂದ ಇಂತಹ ಸಂಸ್ಮರಣೆಗಳು ನಿರಂತರವಾಗಿ ನಡೆಯಬೇಕು. ಈ ಮೂಲಕ ಎಲ್ಲರೂ ನೆನೆಪಿಸಿಕೊಳ್ಳುವಂತಾಗುವುದು. ಕಲಾವಿದರು ದುಶ್ಚಟ್ಟಗಳಿಂದ ದೂರವಿರಬೇಕು. ಆ ಮೂಲಕ ಯಕ್ಷಗಾನ ಕಲಾವಿದರ ಘನತೆಯನ್ನು ಇನ್ನಷ್ಟು ಹೆಚ್ಚಿಸಬೇಕು ಎಂದರು.

ವೇದಿಕೆಯಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಸತೀಶ ಅಡಪ ಸಂಕಬೈಲು, ರಮೇಶ್ ಚೆಟ್ಟಿಯಾರ್, ಕೆ.ರಾಮ ಮುಗ್ರೋಡಿ, ಕೆ.ಸಿ.ಪಾಟಾಳಿ, ಬಣ್ಣದ ಸುಬ್ರಾಯ ಸಂಪಾಜೆ, ಮಹಾಲಿಂಗ ಕೆ. ದೇರೇಬೈಲು, ತಿಮ್ಮಪ್ಪ ಪುತ್ತೂರು ಮತ್ತಿತರರು ಮಾತನಾಡಿದರು.

ಈ ಸಂದರ್ಭದಲ್ಲಿ ನಿತ್ಯ ಕನ್ನಿಕೆ ಶ್ರೀ ಮುಚ್ಚಿಲೋಟಮ್ಮ ಭಕ್ತಿಗೀತೆ ವೀಡಿಯೋ ಅಲ್ಬಮ್  ಅನ್ನು ಶಿವಶಂಕರ ನೆಕ್ರಾಜೆ ಅವರು ಬಿಡುಗಡೆಗೊಳಿಸಿದರು.

ಆರಂಭದಲ್ಲಿ ಬಣ್ಣದ ಮಹಾಲಿಂಗ ಯಕ್ಷ ಪ್ರತಿಷ್ಠಾನ ಪ್ರಧಾನ ಕಾರ್ಯದರ್ಶಿ ನಾರಾಯಣ ದೇಲಂಪಾಡಿ ಸ್ವಾಗತಿಸಿ, ದಾಮೋದರ ಪಾಟಾಳಿ ನಿರೂಪಿಸಿ, ಸುಬ್ಬಪ್ಪ ಪಟ್ಟೆ ವಂದಿಸಿದರು.

ಬಳಿಕ ಹಿರಿಯ ಕಲಾವಿದರ ಕೂಡುವಿಕೆಯೊಂದಿಗೆ ಸಂಪೂರ್ಣ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಿತು.  ಶಿವಶಂಕರ ನೆಕ್ರಾಜೆ ಅವರ ಪ್ರಾಯೋಜಕತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂರಾರು ಯಕ್ಷಪ್ರಿಯರು ಸಮಾರಂಭಕ್ಕೆ ಸಾಕ್ಷಿಯಾದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries