ಕಾಸರಗೋಡು: ಜಿಲ್ಲೆಯಲ್ಲಿ ಮಳೆ ತೀವ್ರಸ್ವರೂಪ ಪಡೆದುಕೊಂಡಿದ್ದ ಹಿನ್ನೆಲೆಯಲ್ಲಿ ಬುಧವಾರ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಿದ್ದರೂ, ಮಳೆ ಸಂಪೂರ್ಣ ದೂರಾಗಿತ್ತು. ರೆಡ್ ಅಲರ್ಟ್ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಬುಧವಾರ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ರಜೆ ಘೋಷಿಸಿದ್ದು, ಹಗಲು ಬಿಸಿಲಿನ ವಾತಾವರಣ ಕಂಡುಬಂದಿತ್ತು. ಮಳೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಈಗಾಗಲೇ ಶಿಕ್ಷಣ ಸಂಸ್ಥೆಗಳಿಗೆ ಹಲವು ದಿನ ರಜೆ ನೀಡಲಾಗಿದೆ. ಇದರಿಂದ ಸಕಾಲಕ್ಕೆ ಪಾಠ ಪೂರ್ತಿಗೊಳಿಸಲು ಸಾಧ್ಯವಾಗದಿರುವ ಬಗ್ಗೆ ಶಿಕ್ಷಕರೂ ಅಳಲು ವ್ಯಕ್ತಪಡಿಸುತ್ತಾರೆ, ಕಳೆದ ಎರಡು ಮೂರು ದಿವಸಗಳಿಂದ ಅಬ್ಬರದ ಮಳೆಯಾಗದಿರುವುದರಿಂದ, ರೆಡ್ ಅಲರ್ಟ್ ಜಾರಿಯಾದ ಬುಧವಾರದಂದು ಶಿಕ್ಷಣ ಸಂಸ್ಥೆಗಳಿಗೆ ರಜೆ ನೀಡಬೇಕಾದ ಅಗತ್ಯವಿರಲಿಲ್ಲ ಎಂಬುದಾಗಿ ಕೆಲವು ಹೆತ್ತವರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ ಸರ್ಕಾರದ ಮಾನದಂಡ ಪ್ರಕಾರ ರೆಡ್ ಅಲರ್ಟ್ ಜಾರಿಯಾದ ಹಿನ್ನೆಲೆಯಲ್ಲಿ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿತ್ತು.




