ಕಾಸರಗೋಡು: ಅಕ್ಕರ ಫೌಂಡೇಶನ್ ಮುಳಿಯಾರು ಮತ್ತು ಚೆನ್ನೈನ ಫ್ರೀಡಂ ಟ್ರಸ್ಟ್ ಸಹಯೋಗದೊಂದಿಗೆ ವಿಕಲಚೇತನರಿಗೆ ದೈನಂದಿನ ಜೀವನದಲ್ಲಿ ಸಹಾಯ ಮಾಡುವ ಪರಿಕರಗಳನ್ನು ವಿತರಿಸಲಾಯಿತು. ತಪಾಸಣಾ ಶಿಬಿರದ ಮೂಲಕ ಆಯ್ಕೆಯಾದ 170ಕ್ಕೂ ಹೆಚ್ಚುಮಂದಿಗೆ ಉಪಕರಣ ವಿತರಿಸಲಾಯಿತು.
ಹಸ್ತಾಂತರಿಸಲಾದ ಸಲಕರಣೆಗಳಲ್ಲಿ ಗಾಲಿ ಕುರ್ಚಿಗಳು, ಸಿಪಿ ಕುರ್ಚಿಗಳು, ಕೃತಕ ಕಾಲುಗಳು, ಕೃತಕ ತೋಳುಗಳು, ವಾಕರ್‍ಗಳು ಒಳಗೊಂಡಿತ್ತು. ಅಕ್ಕರ ಫೌಂಡೇಶನ್‍ನಲ್ಲಿ ನಡೆದ ಸಮಾರಂಭದಲ್ಲಿ ಎಂಡೋಸಲ್ಫಾನ್ ಸೆಲ್ ಸಹಾಯಕ ಜಿಲ್ಲಾಧಿಕಾರಿ ಲಿಪು ಎಸ್. ಲಾರೆನ್ಸ್ ಉದ್ಘಾಟಿಸಿದರು. ಫ್ರೀಡಂ ಟ್ರಸ್ಟ್ ಸಂಸ್ಥಾಪಕ ಡಾ. ಎಸ್. ಸುಂದರ್ ಅಧ್ಯಕ್ಷತೆ ವಹಿಸಿದ್ದರು.
ಸಿಎಸ್‍ಆರ್ ಪ್ರಾಯೋಜಕ ವಾರಾ ಫ್ಯೂಚರ್ ಎಲ್‍ಪಿ ಸಹಾಯಕ ವ್ಯವಸ್ಥಾಪಕ ಇಲವಂತನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಅಕ್ಕರ ಫೌಂಡೇಶನ್ ಕ್ಲಿನಿಕಲ್ ಹೆಡ್ ಜಿನಿಲ್ ರಾಜ್, ತಾಂತ್ರಿಕ ಹೆಡ್ ಎಲಿಜಬೆತ್, ಮಾನವ ಸಂಪನ್ಮೂಲ ಆಡಳಿತ ಮುಖ್ಯಸ್ಥೆ ಪೂಜಾ ನಿದೀಶ್, ಯೋಜನಾ ವ್ಯವಸ್ಥಾಪಕಿ ಮಿಸಾಬ್, ಸಮುದಾಯ ಸಹಾಯಕ ಸಾನಿಕಾ ಕೆ.ವಿ. ಉಪಸ್ಥಿತರಿದ್ದರು. ಫೌಂಡೇಶನ್ ಸಿಇಒ ಮುಹಮ್ಮದ್ ಯಾಸಿರ್ ಸ್ವಾಗತಿಸಿದರು.


