ಕಾಸರಗೋಡು: ಜಿಲ್ಲೆಯಲ್ಲಿ ಮಾದಕ ವಸ್ತು ಹಾಗೂ ಮರಳು ಮಾಫಿಯಾ ವಿರುದ್ಧ ಕಾರ್ಯಚರಣೆ ಚುರುಕುಗೊಳಿಸುವಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ರವಾಡ ಚಂದ್ರಶೇಖರ್ ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾಗಿ ನೇಮಕಗೊಂಡ ಬಳಿಕ ಇದೇ ಮೊದಲ ಬಾರಿಗೆ ಕಾಸರಗೋಡಿಗೆ ಆಗಮಿಸಿರುವ ಇವರು, ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಮುಂದೆ ನಡೆಯಲಿರುವ ತ್ರಿಸ್ತರ ಪಂಚಾಯಿತಿ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸರು ಸನ್ನದ್ಧರಾಗುವಂತೆ ಸೂಚಿಸಿದರು. ಮರಳು ಮಾಫಿಯಾಗಳ ಜತೆ ಶಾಮೀಲಾದ ಪೊಲೀಸರ ಅಮಾನತುಗೊಳಿಸಿದ ಕ್ರಮವೂ ಸಭೆಯಲ್ಲಿ ಚರ್ಚೆಯಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ವಿ ವಿಜಯಭರತ್ ರೆಡ್ಡಿ ಅವರು ಜಿಲ್ಲಾ ಪೊಲೀಸ್ ಇಲಾಖೆಗೆ ತುರ್ತು ಬೇಡಿಕೆಗಳ ಬಗ್ಗೆ ಡಿಜಿಪಿಗೆ ಮನವರಿಗೆ ಮಾಡಿದರು. ಕುಂಬಳೆ ಹಾಗೂ ಮಂಜೇಶ್ವರ ಪೊಲೀಸ್ ಠಾಣೆಯನ್ನು ವಿಭಜಿಸಿ ಬಾಯಿಕಟ್ಟೆ ಕೇಂದ್ರೀಕ್ರಿಸಿ ಪೈವಳಿಕೆ ಪೊಲೀಸ್ ಠಾಣೆ ಆರಂಬಿಸುವ ಬಗ್ಗೆಯೂ ಚರ್ಚಿಸಲಾಯಿತು. ಬಾಯಿಕಟ್ಟೆಯಲ್ಲಿ ಕಂದಾಯ ಇಲಾಖೆ ಈಗಾಗಲೇ 50ಸೆಂಟ್ ಜಾಗ ಪೊಲೀಸ್ ಇಲಾಖೆಗೆ ಹಸ್ತಾಂತರಿಸಿ 2ವರ್ಷ ಕಳೆದಿದ್ದು, ಠಾಣೆ ನಿರ್ಮಾಣಕ್ಕಿರುವ ಅನಿಶ್ಚಿತಾವಸ್ಥೆ ಪರಿಹರಿಸಬೇಕು. ಪ್ರಸಕ್ತ ಮಜಿಲ್ಲೆಯಲ್ಲಿ 1500 ಮಂದಿ ಪೆÇಲೀಸರಿದ್ದು, ಇದು ಹಲವು ವರ್ಷಗಳ ಹಿಂದಿನ ಜನಸಂಖ್ಯೆಗೆ ಅನುಗುಣವಾಗಿ ಮಂಜೂರಾಘಿ ಲಭಿಸಿದ ಸಂಖ್ಯೆಯಾಗಿದೆ. ಪೊಲೀಸ್ ಬಲ ಹೆಚ್ಚಿಸಲು ಅಗತ್ಯ ಕ್ರಮಕೈಗೊಳ್ಳುವುದು ಅನಿವಾರ್ಯ ಎಂದು ತಿಳಿಸಿದರು.
ಉತ್ತರ ವಲಯ ಐಜಿ ಶ್ರೀರಾಜ್‍ಪಾಲ್ ಮೀನಾ ಐಪಿಎಸ್, ಕಣ್ಣೂರು ರೇಂಜ್ ಡಿಐಜಿ ಯತೀಶ್ ಚಂದ್ರ ಜಿ.ಎಚ್ ಐಪಿಎಸ್, ಹೆಚ್ಚುವರಿ ಎಸ್ಪಿ ದೇವದಾಸನ್ ಸಿ ಎಂ, ಜಿಲ್ಲೆಯ ಡಿವೈಎಸ್‍ಪಿಗಳು, ಎಸ್‍ಐಗಳು ಉಪಸ್ಥಿತರಿದ್ದರು.





