ಬ್ರಸೆಲ್ಸ್: ಡಿಜಿಟಲ್ ಸೇವೆಗಳನ್ನು ನಿಯಂತ್ರಿಸಲು ಐರೋಪ್ಯ ಒಕ್ಕೂಟ ಜಾರಿಗೊಳಿಸಿರುವ ಹೊಸ ನಿಯಮಗಳು ಅಮೆರಿಕದ ಟೆಕ್ ಕಂಪನಿಗಳನ್ನು ಅನ್ಯಾಯವಾಗಿ ಗುರಿಯಾಗಿಸಿದೆ ಎಂಬ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪವನ್ನು ಯೂರೋಪಿಯನ್ ಕಮಿಷನ್ ಅಲ್ಲಗಳೆದಿದೆ.
'ನಮ್ಮ ಭೂಪ್ರದೇಶದೊಳಗೆ ಟೆಕ್ ಕಂಪನಿಗಳ ಚಟುವಟಿಕೆಗಳನ್ನು ನಿಯಂತ್ರಿಸುವುದು ಐರೋಪ್ಯ ಒಕ್ಕೂಟ ಮತ್ತು ಅದರ ಸದಸ್ಯ ರಾಷ್ಟ್ರಗಳ ಸಾರ್ವಭೌಮ ಹಕ್ಕು' ಎಂದು ಯೂರೋಪಿಯನ್ ಕಮಿಷನ್‌ನ ವಕ್ತಾರೆ ಪೌಲಾ ಪಿನೊ ಮಂಗಳವಾರ ತಿಳಿಸಿದ್ದಾರೆ.
ಡಿಜಿಟಲ್ ಸೇವೆಗಳನ್ನು ನಿಯಂತ್ರಿಸಲು ತೆರಿಗೆ ಮತ್ತು ನಿಯಮಗಳನ್ನು ಜಾರಿಗೊಳಿಸುವ ಎಲ್ಲ ದೇಶಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸುವುದಾಗಿ ಟ್ರಂಪ್ ಸೋಮವಾರ ಎಚ್ಚರಿಸಿದ್ದರು. 'ಅಮೆರಿಕದ ತಂತ್ರಜ್ಞಾನಕ್ಕೆ ಹಾನಿ ಎಸಗುವುದು ಇದರ ಹಿಂದಿನ ಉದ್ದೇಶ' ಎಂದು ಟೀಕಿಸಿದ್ದರು.
ಐರೋಪ್ಯ ಒಕ್ಕೂಟವು ತನ್ನ ಹೊಸ ಡಿಜಿಟಲ್ ನಿಯಮಗಳ ಪ್ರಕಾರ, ಮೆಟಾ ಮತ್ತು ಆಯಪಲ್ ಸೇರಿದಂತೆ ಅಮೆರಿಕದ ಕೆಲವು ಟೆಕ್ ಕಂಪನಿಗಳ ಮೇಲೆ ಈಗಾಗಲೇ ಭಾರಿ ದಂಡ ವಿಧಿಸಿದೆ.




