ಕುಂಬಳೆ: ಗಮಕ ಕಲಾಪರಿಷತ್ತು ಕಾಸರಗೋಡು ಗಡಿನಾಡು ಘಟಕ ಮತ್ತು ಸಿರಿಗನ್ನಡ ವೇದಿಕೆ ಕಾಸರಗೋಡು ಇದರ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ಗಮಕ ಶ್ರಾವಣ ಸರಣಿಯ ಮೂರನೇ ಕಾರ್ಯಕ್ರಮ ಶುಕ್ರವಾರ ಕಂಬಾರು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ಶಾಂಭವೀ ಕಲಾಮಂದಿರದಲ್ಲಿ ನಡೆಯಿತು. ಗಮಕ ಎಂದರೇನು, ಅವರ ಆಳ,ಅಗಲ, ವಿಸ್ತಾರಗಳೇನು? ಪ್ರಸ್ತುತ ದಿನಗಳಲ್ಲಿ ಪುರಾಣ ಕಾವ್ಯಗಳನ್ನು ಜನಮಾನಸಕ್ಕೆ ತಲುಪಿಸಲು ಗಮಕ ಕಲಾಪರಿಷತ್ ನಡೆಸುವ ಕಾರ್ಯಕ್ರಮಗಳ ರೂಪುರೇಷೆಗಳ ಕುರಿತಾಗಿ ಸಭೆಯ ಅಧ್ಯಕ್ಷತೆ ವಹಿಸಿದ ಸಿರಿಗನ್ನಡ ವೇದಿಕೆ ಕಾಸರಗೋಡು ಗಡಿನಾಡ ಘಟಕದ ಅಧ್ಯಕ್ಷ ಸಾಹಿತಿ ವಿ.ಬಿ. ಕುಳಮರ್ವ ಮಾಹಿ ನೀಡಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಕೋಳಾರು ಸತೀಶ್ಚಂದ್ರ ಭಂಡಾರಿ ಮಾತನಾಡಿ ತಮ್ಮ ಬಾಲ್ಯದ ದಿನಗಳಲ್ಲಿ ಮನೆ ಮನೆಗಳಲ್ಲಿ ನಡೆಯುತ್ತಿದ್ದ ಭಜನೆ, ಗಮಕವಾಚನದಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ಸ್ಮರಿಸಿ, ಇಂದಿನ ಮಕ್ಕಳಿಗೆ ಅದರ ಔಚಿತ್ಯಗಳನ್ನು ಮನವರಿಕೆ ಮಾಡಿಕೊಡಬೇಕಾದ ಅಗತ್ಯತೆಯನ್ನು ತಿಳಿಸಿದರು. ಪಿ. ನರಹರಿ ಮಾಸ್ತರ್ ಕಳತ್ತೂರು, ಭಾರತಿ ಟೀಚರ್ ಕಳತ್ತೂರು ತೊರವೆ ರಾಮಾಯಣದ ಸೀತಾಸ್ವಯಂವರ ಕಾವ್ಯಭಾಗದ ಗಮಕವಾಚನ ನಡೆಸಿಕೊಟ್ಟರು. ಸಭಾ ಕಾರ್ಯಕ್ರಮವನ್ನು ಕಂಬಾರು ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ರವಿಶಂಕರ್ ಭಟ್ ಎಡಕ್ಕಾನ ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು.
ರೇವತಿ ಅಮ್ಮ ಕಕ್ವೆ ಅವರು ಪ್ರಾರ್ಥನೆ ನಡೆಸಿದರು. ಅಶೋಕ ಮಾಸ್ತರ್ ಬಾಡೂರು ಸ್ವಾಗತಿಸಿ, ಯನ್.ಯಚ್. ಲಕ್ಷ್ಮೀನಾರಾಯಣ ಭಟ್ ನೆರಿಯ ವಂದಿಸಿದರು. ಸಾಹಿತಿ ಪ್ರಸನ್ನ ವಿ. ಚೆಕ್ಕೆಮನೆ ನಿರ್ವಹಿಸಿದರು.




.jpg)
