ಬದಿಯಡ್ಕ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜನಜಾಗೃತಿ ವೇದಿಕೆ ಕಾಸರಗೋಡು ತಾಲೂಕು ಬದಿಯಡ್ಕ ವಲಯ ಸ್ವಾಸ್ಥ್ಯ ಸಂಕಲ್ಪ ಮಾಹಿತಿ ಕಾರ್ಯಕ್ರಮ, ಮಾದಕ ವಸ್ತುಗಳ ದುಷ್ಪರಿಣಾಮ ಎಂಬ ವಿಷಯದಲ್ಲಿ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠ ಶಾಲೆಯ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಾಗಾರ ಶುಕ್ರವಾರ ಜರಗಿತು.
ಜನಜಾಗೃತಿ ವೇದಿಕೆ ಕಾಸರಗೋಡು ತಾಲೂಕು ಅಧ್ಯಕ್ಷ ಅಖಿಲೇಶ್ ನಗುಮುಗಂ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿ ಪೋಷಕರನ್ನು ಗೌರವಿಸುವುದು, ಭವಿಷ್ಯದ ಉತ್ತಮ ಪ್ರಜೆಗಳಾಗಲು ಹಾಗೂ ಉತ್ತಮ ಸಮಾಜ ನಿರ್ಮಿಸಲು ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಗಮನವಹಿಸಬೇಕು. ಯಾವುದೇ ಕಾರಣಕ್ಕೂ ಮಾದಕ ವಸ್ತುಗಳ ವ್ಯಸನಿಗಳಾಗಬಾರದು. ಕುಟುಂಬದ ಮೇಲೆ ಗಂಭೀರ ಪರಿಣಾಮ ಬೀರುವುದರಿಂದ ಮಾದಕ ವಸ್ತುಗಳಿಂದ ಅತ್ಯಂತ ಜಾಗೃತರಾಗಿರಬೇಕು. ಸ್ವಸ್ಥ ಸಮಾಜದಲ್ಲಿ ಆರೋಗ್ಯವಂತ ಜೀವನವನ್ನು ನಡೆಸಬೇಕು ಎಂದರು.
ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮಾ ಪಂಜಿತ್ತಡ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಡೆಪ್ಯುಟಿ ತಹಶೀಲ್ದಾರ್ ನಾರಾಯಣ ಗೋಸಾಡ ಮಕ್ಕಳಿಗೆ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ತರಗತಿ ನೀಡಿ ಮಾದಕ ವಸ್ತುಗಳು ಮಕ್ಕಳ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದರ ದುರ್ಬಳಕೆಯಿಂದಾಗಿ, ಮಕ್ಕಳು ಕಲಿಕೆ ಮತ್ತು ಅಭಿವೃದ್ಧಿಯಲ್ಲಿ ಹಿಂದುಳಿಯುತ್ತಾರೆ. ಇದು ಮಕ್ಕಳ ಏಕಾಗ್ರತೆ ಮತ್ತು ಸ್ಮರಣೆಯ ಮೇಲೆ ಪರಿಣಾಮ ಬೀರುತ್ತದೆ. ಆದುದರಿಂದ ಮಾದಕ ವಸ್ತುಗಳ ಚಟಕ್ಕೆ ಬಲಿಯಾಗದೆ ಮಕ್ಕಳು ಉತ್ತಮ ವ್ಯಕ್ತಿತ್ವ ಬೆಳೆಸಿಕೊಂಡು ಸಮಾಜಕ್ಕೆ ಹಾಗೂ ಕುಟುಂಬಕ್ಕೆ ಮಾದರಿಯಾಗಬೇಕು ಎಂದರು.
ವಿದ್ಯಾಗಿರಿ ಒಕ್ಕೂಟದ ಅಧ್ಯಕ್ಷ ತಾರಾನಾಥ ರೈ, ಸೇವಾ ಪ್ರತಿನಿಧಿ ಸುನೀತಾ ಉಪಸ್ಥಿತರಿದ್ದರು. ಸೇವಾ ಪ್ರತಿನಿಧಿ ಕವಿತಾ ಸ್ವಾಗತಿಸಿ, ಮೇಲ್ವಿಚಾರಕಿ ಸುಗುಣ ವಂದಿಸಿದರು.




.jpg)
