ಕಾಸರಗೋಡು: ಜಿಲ್ಲೆಯ ನಾನಾ ಕಡೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಾರಂಭ ಭಕ್ತಿ, ಸಂಭ್ರಮದಿಂದ ನಡೆಯುತ್ತಿದೆ. ಕಳೆದ ಎರಡು ದಿವಸಗಳಿಂದ ಸುರಿಯುತ್ತಿರುವ ಬಿರುಸಿನ ಮಳೆಯನ್ನೂ ಲಕೆಕ್ಕಿಸದೆ ನೂರಾರು ಮಂದಿ ಭಕ್ತಾದಿಗಳು ಗಣಪತಿ ಉತ್ಸವದಲ್ಲಿ ಪಾಲ್ಗೊಂಡಿದ್ದರು.
ಒಂದೆಡೆ ಶಾಲಾ ಕಾಲೇಜುಗಳಿಗೆ ಓಣಂ ರಜೆ ಜತೆಗೆ ಗಣೇಶ ಚತುರ್ಥಿಗೆ ಆ. 27ರಂದು ಕಾಸರಗೋಡು ಜಿಲ್ಲೆಗೆ ಪ್ರಾದೇಶಿಕ ರಜೆ ಘೋಷಿಸಿದ್ದರೆ, 28ರಂದು ಅಯ್ಯಂಗಾಳಿ ಜಯಂತಿ ಹಿನ್ನೆಲೆಯಲ್ಲಿ ಸಾರ್ವತ್ರಿಕ ರಜೆಯಾಗಿದ್ದರಿಂದ ಜಿಲ್ಲಾದ್ಯಂತ ಗಣೇಶೋತ್ಸವ ಸಮಾರಂಭಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನಸಂದಣಿಯಿತ್ತು. ಪೆರ್ಲ ಶ್ರೀ ಸತ್ಯನಾರಾಯಣ ಮಂದಿರ ಹಾಗೂ ಬದಿಯಡ್ಕ ಶ್ರೀ ಗಣೇಶ ಮಂದಿರದಲ್ಲಿ 54ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವನ್ನು ಆಚರಿಸಲಾಗಿದ್ದು, ಭವ್ಯ ಶೋಭಾಯಾತ್ರೆಯ ಮೂಲಕ ಗುರುವಾರ ಗಣೇಶೋತ್ಸವ ಸಂಪನ್ನಗೊಮಡಿತ್ತು.
ಕುಂಬಳೆ ಸೀಮೆಯ ಪ್ರಸಿದ್ಧ ನಾಲ್ಕು ದೇವಾಲಯಗಳಲ್ಲಿ ಒಂದಾಗಿರುವ ಮಧೂರು ಶ್ರೀಮದನಂತೆಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಬುಧವಾರ ವಿಶೇಷ ಗಣಪತಿ ಹವನದೊಂದಿಗೆ ಶ್ರೀ ವಿನಾಯಕ ಚತಿರ್ಥಿ ಭಕ್ತಿ ಸಂಭ್ರಮದಿಂದ ನೆರವೇರಿತು.
ಕಾಸರಗೋಡು ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ವಠಾರದಲ್ಲಿ 70ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ 'ಸಪ್ತತಿ ಮಹೋತ್ಸವ'ಕ್ಕೆ ಬುಧವಾರ ಚಾಲನೆ ನೀಡಲಾಗಿದ್ದು, ಸೆ. 6ರ ವರೆಗೆ ಜರುಗಲಿದೆ. ಸಪ್ತತಿ ಮಹೋತ್ಸವದ ಅಂಗವಾಗಿ ಶ್ರೀ ಗಣೇಶ ಸನ್ನಿಧಿಯಲ್ಲಿ ಅಯುತ ನಾಳಿಕೇರ ಶ್ರೀ ಮಹಾ ಗಣಪತಿಯಾಗ (10008 ನಾಳಿಕೇರ ಮಹಾ ಗಣಪತಿಯಾಗ)ಆಯೋಜಿಸಲಾಯಿತು. ಕಾಞಂಗಾಡು, ಮುಳ್ಳೇರಿಯ, ಕುಂಟಾರು, ಕುಂಬಳೆ, ಹೊಸಂಗಡಿ, ವರ್ಕಾಡಿ, ಮಂಜೇಶ್ವರ ಸೇರಿದಂತೆ ನಾನಾ ಕಡೆ ಸಾರ್ವಜನಿಕ ಗಣೇಶೋತ್ಸವ ಆಯೋಜಿಸಲಾಗಿತ್ತು.





