HEALTH TIPS

Uttarkashi Cloudburst: ಕ್ಷಣಾರ್ಧದಲ್ಲಿ ಸರ್ವನಾಶವಾದ ಧರಾಲಿ ಗ್ರಾಮದ ಜನವಸತಿ ಪ್ರದೇಶ; ಉಳಿದಿರುವುದು ಕೇವಲ ಅವಶೇಷ!

ಡೆಹ್ರಾಡೂನ್‌: ಉತ್ತರಾಖಂಡ ಪ್ರಾಕೃತಿಕ ಸಂಪನ್ಮೂಲಗಳಿಂದ ತುಂಬಿ ತುಳುಕುತ್ತಿರುವ ರಾಜ್ಯ. ಇಲ್ಲಿನ ಪ್ರಾಕೃತಿಕ ಸೌಂದರ್ಯ ಭಾರತದ ಆಧ್ಯಾತ್ಮದೊಂದಿಗೆ ಬೆರೆತಿದೆ. ಆದರೆ ಈ ರಾಜ್ಯ ಪದೇ ಪದೇ ಪ್ರಾಕೃತಿಕ ವಿಕೋಪಕ್ಕೂ ಗುರಿಯಾಗುತ್ತಿದ್ದು, ಮೇಘಸ್ಫೋಟ, ಭೂಕಂಪ, ಪ್ರವಾಹ ಮತ್ತಿತರ ನೈಸರ್ಗಿಕ ವಿಕೋಪಗಳು ಉತ್ತರಾಖಂಡ ರಾಜ್ಯವನ್ನು ಹಿಂಡಿ ಹಿಪ್ಪೆ ಮಾಡುತ್ತಿವೆ.

ಇದಕ್ಕೆ ಪುಷ್ಠಿ ಎಂಬಂತೆ ಉತ್ತರಕಾಶಿಯ ಬಡ್ಕೋಟ್ ತಹಶೀಲ್ ಪ್ರದೇಶದ ಬನಾಲ್ ಪಟ್ಟಿಯಲ್ಲಿ, ಭಾರಿ ಮಳೆಯಿಂದಾಗಿ ಇಡೀ ಜನವಸತಿ ಪ್ರದೇಶವೊಂದು ಕ್ಷಣಾರ್ಧದಲ್ಲಿ ನಾಶವಾದ ಘಟನೆ ನಡೆದಿದೆ. ಮೇಘಸ್ಫೋಟದಿಂದಾಗಿ ಇಲ್ಲಿನ ಕೀರ್‌ ಗಂಗಾನದಿ ಉಕ್ಕಿ ಹರಿದಿದ್ದು, ನೀರು ಜನವಸತಿ ಪ್ರದೇಶಕ್ಕೆ ನುಗ್ಗಿ ಭಾರೀ ಹಾನಿಯನ್ನುಂಟು ಮಾಡಿದೆ. ಕಳೆದ ಜೂನ್‌ನಲ್ಲಿ ಇಲ್ಲಿನ ಬಾಲಿಘರ್‌ನಲ್ಲಿ ಮೇಘಸ್ಫೋಟ ಸಂಭವಿಸಿತ್ತು.

ಏಕಾಏಕಿ ಉಂಟಾದ ಪ್ರವಾಹದಿಂದ ಜನರು ಭಯಭೀತರಾಗಿದ್ದು, ಪ್ರಾಣ ಉಳಿಸಿಕೊಳ್ಳಲು ಸುರಕ್ಷಿತ ಪ್ರದೇಶಗಳತ್ತ ವಲಸೆ ಹೋಗಲಾರಂಭಿಸಿದ್ದಾರೆ. ಈ ಪ್ರವಾಹದಲ್ಲಿ 18ಕ್ಕೂ ಹೆಚ್ಚು ಕುರಿಗಳು ಕೊಚ್ಚಿಹೋಗಿದ್ದು, ಯಾವುದೇ ಮಾನವ ಪ್ರಾಣಹಾನಿ ಸಂಭವಿಸಿದ ಬಗ್ಗೆ ಇದುವರೆಗೂ ಮಾಹಿತಿ ಲಭ್ಯವಾಗಿಲ್ಲ.

ಅತ್ತ ಪ್ರವಾಹದಲ್ಲಿ ಧರಾಲಿ ಎಂಬ ಗ್ರಾಮ ಸಂಪೂರ್ಣವಾಗಿ ಕೊಚ್ಚಿಹೋಗಿದ್ದು, ಇಲ್ಲಿ ವಾಸಿಸುತ್ತಿದ್ದ ಜನರ ಸುರಕ್ಷತೆ ಬಗ್ಗೆ ಇನ್ನಷ್ಟೇ ಮಾಹಿತಿಗಳು ಲಭ್ಯವಾಗಬೇಕಿದೆ.

ಮುಂದುವರೆಯಲಿದೆ ಮಳೆ:

ಹವಾಮಾನ ಇಲಾಖೆಯು ಆಗಸ್ಟ್ 10ರವರೆಗೆ ಉತ್ತರಕಾಶಿ ಪ್ರದೇಶದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ. ಈ ಕುರಿತು ಮಾಹಿತಿ ನೀಡಿರುವ ಹವಾಮಾನ ಇಲಾಖೆಯ ನಿರ್ದೇಶಕ ರೋಹಿತ್ ಥಪ್ಲಿಯಾಲ್, "ರಾಜ್ಯದಲ್ಲಿ ಆಗಸ್ಟ್ 10ರವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ. ವಿಶೇಷವಾಗಿ ಪರ್ವತ ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾಗಲಿದ್ದು, ಜನರು ಸುರಕ್ಷಿತ ಪ್ರದೇಶಗಳಿಗೆ ವಲಸೆ ಹೋಗಬೇಕು" ಎಂದು ತಿಳಿಸಿದ್ದಾರೆ.

ಉತ್ತರಾಖಂಡದನಲ್ಲಿ ಭಾರೀ ಮಳೆಯಿಂದಾಗಿ ತೀವ್ರ ಮಾನವ ಸಂಕಷ್ಟ ಎದುರಾಗಿದೆ. ಡೆಹ್ರಾಡೂನ್, ಪೌರಿ, ಟಿಹ್ರಿ ಮತ್ತು ಹರಿದ್ವಾರದಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಯಮುನೋತ್ರಿ ಹೆದ್ದಾರಿಯಲ್ಲಿ ರಸ್ತೆ ಕುಸಿತದಿಂದಾಗಿ ಸಂಚಾರ ಸಂಪೂರ್ಣವಾಗಿ
ಸ್ಥಗಿತಗೊಂಡಿದೆ.

ಭಾರೀ ಮಳೆಯಿಂದಾಗಿ ಯಮುನೋತ್ರಿ ಹೆದ್ದಾರಿಯಲ್ಲಿ ಎರಡನೇ ದಿನವೂ ಸಂಚಾರ ಆರಂಭವಾಗಿಲ್ಲ. ಸ್ಯಾನಾ ಚಟ್ಟಿ ಬಳಿ ರಸ್ತೆಯು ಕುಸಿದಿದ್ದು, ವಾಹನ ಸಂಚಾರಕ್ಕೆ ತೀವ್ರ ತೊಂದರೆಯುಂಟಾಗಿದೆ. ಹೆದ್ದಾರಿಯನ್ನು ಸರಿಪಡಿಸಲು ಪ್ರಯತ್ನಗಳು ಮುಂದುವರೆದಿವೆಯಾದರೂ, ನಿರಂತರ ಮಳೆ ಇದಕ್ಕೆ ಅಡ್ಡಿಯನ್ನುಂಟು ಮಾಡುತ್ತಿದೆ. ಕಳೆದ ಜುಲೈನಲ್ಲಿ ಹಿಮಾಚಲ ಪ್ರದೇಶ ಮೇಘಸ್ಫೋಟ ಕೂಡ ಭಾರೀ ಅವಾಂತರ ಸೃಷ್ಟಿಸಿತ್ತು.

ಉತ್ತರಕಾಶಿ ಜಿಲ್ಲೆಯಲ್ಲಿ ಭಾನುವಾರ ರಾತ್ರಿಯಿಂದ ಮಳೆಯಾಗುತ್ತಿದೆ. ಸ್ಯಾನಾಚಟ್ಟಿ ಬಳಿ ಯಮುನೋತ್ರಿ ಹೆದ್ದಾರಿಯ ಸುಮಾರು 25 ಮೀಟರ್ ಭಾಗ ಕುಸಿದಿದೆ. ಓಜ್ರಿ ಡಾಬರ್‌ಕೋಟ್‌ನಲ್ಲೂ ಭಾರೀ ಮಳೆಯ ಪರಿಣಾಮಗಳು ಗೋಚರವಾಗುತ್ತಿವೆ. ಸ್ಯಾನಾಚಟ್ಟಿಯ ಒಂದು ಬದಿಯಲ್ಲಿರುವ ಬೆಟ್ಟದಿಂದ ಬಂಡೆಗಳು ಉರುಳುತ್ತಿದ್ದು, ವಾಹನ ಸಂಚಾರಕ್ಕೆ ಭಾರೀ ಅಪಾಯ ತಂದೊಡ್ಡಿದೆ. ಅದೇ ರೀತಿ ಗಂಗೋತ್ರಿ ಹೆದ್ದಾರಿಯಲ್ಲಿಯೂ ಸಹ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಹಲವು ಕಡೆಗಳಲ್ಲಿ ರಸ್ತೆ ಸಂಪೂರ್ಣ ಬಂದ್ ಆಗಿದೆ.

ಚಾರ್‌ಧಾಮ್‌ ಯಾತ್ರೆಗೆ ತೊಂದರೆ:

ಇನ್ನು ಭಾರೀ ಮಳೆ ಮತ್ತು ಮೇಘಸ್ಫೋಟದಿಂದಾಗಿ, ಚಾರ್‌ಧಾಮ್ ಯಾತ್ರೆಗೆ ತೊಂದರೆಯಾಗಿದೆ. ಯಮುನೋತ್ರಿ ಹೆದ್ದಾರಿ ಎರಡನೇ ದಿನವೂ ತೆರೆದಿಲ್ಲವಾದ್ದರಿಂದ ಚಾರ್‌ಧಾಮ್‌ ಯಾತ್ರಾರ್ಥಿಗಳು ತೊಂದರೆಗೆ ಸಿಲುಕಿದ್ದಾರೆ. "ನದಿಗಳ ನೀರಿನ ಮಟ್ಟ ಹೆಚ್ಚಳವಾಗುತ್ತಿದ್ದು, ಹೆದ್ದಾರಿ ಕುಸಿದಿರುವ ಸ್ಥಳದಲ್ಲಿ ಸಣ್ಣ ವಾಹನಗಳನ್ನು ಸಾಗಿಸಲು ಪ್ರಯತ್ನಿಸಲಾಗುವುದು" ಎಂದು ಬಾರ್ಡರ್‌ ರೋಡ್‌ ಆರ್ಗನೈಸೇಷನ್‌ (ಬಿಆರ್‌ಒ) ಮಾಹಿತಿ ನೀಡಿದೆ.

ನಿರಂತರ ಪ್ರಾಕೃತಿಕ ವಿಕೋಪಗಳು:

ಉತ್ತರಾಖಂಡ ರಾಜ್ಯಕ್ಕೂ ಪ್ರಾಕೃತಿಕ ವಿಕೋಪಗಳೊಗೂ ಅವಿನಾಭಾವ ಸಂಬಂಧ. ಇಲ್ಲಿನ ಭೂಪ್ರದೇಶವೇ ನೈಸರ್ಗಿಕ ವಿಕೋಪಗಳನ್ನು ಆಮಂತ್ರಿಸುವಂತಿದೆ. 2013ರಲ್ಲಿ ಕೇದಾರನಾಥ್‌ ಬಳಿ ಸಂಭವಿಸಿದ ಭೀಕರ ಮೇಘಸ್ಫೋಟದಿಂದಾಗಿ ಮಂದಾಕಿನಿ ನದಿಯಲ್ಲಿ ಪ್ರವಾಹ ಉಂಟಾಗಿತ್ತು.

ಈ ವೇಳೆ ಕೇದಾರನಾಥ್‌ ಯಾತ್ರೆಗೆ ಹೊರಟಿದ್ದ ಅನೇಕ ಕನ್ನಡಿಗರು ಪ್ರವಾಹದಲ್ಲಿ ಭೀಕರ ಪ್ರವಾಹದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದರು. ಆಗ ಕರ್ನಾಟಕ ಸರ್ಕಾರದ ಮೂಲ ಸೌಕರ್ಯ ಸಚಿವರಾಗಿದ್ದ ಸಂತೋಷ್‌ ಲಾಡ್‌, ಉತ್ತರಾಖಂಡಕ್ಕೆ ತೆರಳಿ ಎಲ್ಲಾ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರುವಲ್ಲಿ ಮಹತ್ತರವಾದ ಪಾತ್ರ ನಿರ್ವಹಿಸಿದ್ದರು.

ಅದೇ ರೀತಿ 2022ರಲ್ಲಿ ಜಮ್ಮು ಮತ್ತು ಕಾಶ್ಮೀರದ ಅಮರನಾಥ್‌ ಯಾತ್ರೆ ಸಂದರ್ಭದಲ್ಲಿ ಮೇಘಸ್ಫೋಟ ಸಂಭವಿಸಿದ್ದಾಗಲೂ, ಕರ್ನಾಟಕ ಸರ್ಕಾರ ಕನ್ನಡಿಗರ ರಕ್ಷಣೆಗಾಗಿ ಸಹಾಯವಾಣಿ ತೆರೆದಿದ್ದನ್ನು ಇಲ್ಲಿ ಸ್ಮರಿಸಬಹುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries