HEALTH TIPS

ಗೌತಮ್ ಅದಾನಿಗೆ ಬಿಜೆಪಿ ₹1ರಂತೆ 1,000 ಎಕರೆ ಭೂಮಿ ನೀಡಿದೆ: ಕಾಂಗ್ರೆಸ್ ಆರೋಪ

ನವದೆಹಲಿ: ಬಿಹಾರದಲ್ಲಿ ವಿದ್ಯುತ್ ಯೋಜನೆಗಾಗಿ ಪ್ರಧಾನಿ ನರೇಂದ್ರ ಮೋದಿಯವರ ಆಪ್ತ 'ಸ್ನೇಹಿತ' ಗೌತಮ್ ಅದಾನಿ ಅವರಿಗೆ ಆಡಳಿತಾರೂಢ ಎನ್‌ಡಿಎ ಸರ್ಕಾರವು ₹1ರಂತೆ 1,050 ಎಕರೆ ಭೂಮಿಯನ್ನು 33 ವರ್ಷಗಳಿಗೆ ಗುತ್ತಿಗೆ ನೀಡಲು ಮುಂದಾಗಿದೆ. ಈ ಮೂಲಕ ಬಿಹಾರದ ಜನರಿಗೆ ಪ್ರತಿ ಯೂನಿಟ್‌ಗೆ ₹6.75ರಂತೆ ವಿದ್ಯುತ್ ಮಾರಾಟ ಮಾಡಲು ಅವಕಾಶ ನೀಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್‌ ಮಾಧ್ಯಮ ಹಾಗೂ ಪ್ರಚಾರ ವಿಭಾಗದ ಮುಖ್ಯಸ್ಥ ಪವನ್‌ ಖೇರಾ, ಬಿಹಾರದಲ್ಲಿ 'ಡಬಲ್ ಲೂಟಿ' ನಡೆಯುತ್ತಿದೆ. ಬಿಹಾರದ ಜನರು ಭಾಗಲ್ಪುರದಲ್ಲಿ ನಿರ್ಮಿಸಲಾದ ವಿದ್ಯುತ್ ಸ್ಥಾವರದಿಂದ ವಿದ್ಯುತ್ ಖರೀದಿಸಬೇಕಾಗುತ್ತದೆ ಎಂದು ದೂರಿದ್ದಾರೆ.

'ಮೋದಿ ನೇತೃತ್ವದ ಕೇಂದ್ರ ಸರ್ಕಾರವು ₹21,400 ಕೋಟಿ ವೆಚ್ಚದ 2,400 ಮೆಗಾವ್ಯಾಟ್ ವಿದ್ಯುತ್ ಯೋಜನೆಗಾಗಿ ಅದಾನಿ ಅವರಿಗೆ ಒಂದು ವರ್ಷಕ್ಕೆ ಒಂದು ರೂಪಾಯಿಯಂತೆ ಹತ್ತು ಲಕ್ಷ ಮರಗಳು, 1,050 ಎಕರೆ ಭೂಮಿಯನ್ನು 33 ವರ್ಷಗಳ ಕಾಲ ಗುತ್ತಿಗೆ ನೀಡಲು ಮುಂದಾಗಿದೆ. ಈ ಸಂಬಂಧ ಅಧಿಕಾರಿಗಳು ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುತ್ತಿದ್ದಾರೆ' ಎಂದು ಖೇರಾ ಗುಡುಗಿದ್ದಾರೆ.

'ಮೋದಿ ಸರ್ಕಾರ ಈ ವಿದ್ಯುತ್ ಸ್ಥಾವರವನ್ನು ಬಜೆಟ್‌ನಲ್ಲಿ ಘೋಷಿಸಿತ್ತು. ಜತೆಗೆ, ಸ್ಥಾವರವನ್ನು ಸ್ವತಃ ಸ್ಥಾಪಿಸುವುದಾಗಿ ಸರ್ಕಾರ ಹೇಳಿಕೊಂಡಿತ್ತು. ಆದರೆ, ಕೆಲವು ದಿನಗಳ ಬಳಿಕ ಈ ಯೋಜನೆಯನ್ನು ಅದಾನಿ ಸಮೂಹಕ್ಕೆ ಹಸ್ತಾಂತರಿಸಿತ್ತು. ಬಿಹಾರದ ರೈತರ ಭೂಮಿ, ಹಣ, ಕಲ್ಲಿದ್ದಲನ್ನು ಬಳಿಸಿಕೊಂಡು ಉತ್ಪಾದಿಸುವ ವಿದ್ಯುತ್ ಅನ್ನು ಜನರಿಗೆ ಪ್ರತಿ ಯೂನಿಟ್‌ಗೆ ₹6.75ರಂತೆ ಮಾರಾಟ ಮಾಡಲಾಗುತ್ತದೆ. ಇದುವೇ ಬಿಜೆಪಿ ಮಾಡುತ್ತಿರುವ 'ಡಬಲ್ ಲೂಟಿ' ಆಗಿದೆ. ಮೋದಿಯ ಆಪ್ತ ಸ್ನೇಹಿತರಾಗಿರುವ ಅದಾನಿಯವರು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ' ಎಂದು ಖೇರಾ ಕುಟುಕಿದ್ದಾರೆ.

'ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೂ ಮುನ್ನ ಅದಾನಿಗೆ ವಿದ್ಯುತ್ ಸ್ಥಾವರ ಯೋಜನೆ ಮತ್ತು ಧಾರಾವಿ ಯೋಜನೆಯನ್ನು ನೀಡಲಾಗಿತ್ತು. ಅದೇ ರೀತಿ ಜಾರ್ಖಂಡ್ ಮತ್ತು ಛತ್ತೀಸಗಢದಲ್ಲಿ ಚುನಾವಣೆಗೂ ಮುನ್ನ ಕೈಗಾರಿಕೋದ್ಯಮಿಗಳಿಗೆ ಯೋಜನೆಗಳನ್ನು ನೀಡಲಾಗಿತ್ತು. ಬಿಜೆಪಿಗರು ಚುನಾವಣೆಯಲ್ಲಿ ಸೋಲುತ್ತೇವೆ ಎಂದು ಭಾವಿಸಿದಾಗಲೆಲ್ಲಾ ಅದಾನಿಗೆ ಉಡುಗೊರೆಗಳನ್ನು ಮುಂಚಿತವಾಗಿ ನೀಡುತ್ತಿದ್ದಾರೆ ಎಂದು ಖೇರಾ ಆರೋಪಿಸಿದ್ದಾರೆ.

'ಬಿಹಾರದಲ್ಲಿ ರೈತರನ್ನು ಬೆದರಿಸಿ, ಸಹಿ ಹಾಕುವಂತೆ ಒತ್ತಾಯಿಸಿ ಅವರ ಭೂಮಿಯನ್ನು ಕಸಿದುಕೊಳ್ಳಲಾಗುತ್ತಿದೆ. ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶಕ್ಕೆ ಹೊಲಿಸಿದರೆ ಪ್ರತಿ ಯೂನಿಟ್‌ ವಿದ್ಯುತ್‌ ಅನ್ನು ₹3ರಿಂದ ₹4 ಹೆಚ್ಚುವರಿ ದರಕ್ಕೆ ಜನರಿಗೆ ಮಾರಾಟ ಮಾಡಲಾಗುತ್ತದೆ' ಎಂದು ಖೇರಾ ವಿವರಿಸಿದ್ದಾರೆ.

ಬಿಹಾರದಲ್ಲಿ ಬಿಜೆಪಿಯು 'ತಾಯಿಯ ಹೆಸರಿನಲ್ಲಿ ಒಂದು ಮರ' ಎಂಬ ಅಭಿಯಾನವನ್ನು ನಡೆಸುತ್ತದೆ. ಆದರೆ, ರೈತರು ತಮ್ಮ ತಾಯಿಯಂತೆ ಪರಿಗಣಿಸುವ ಭೂಮಿಯನ್ನು ಕೇವಲ ₹1ರಂತೆ ಬೆಲೆ ನಿಗದಿಪಡಿಸುತ್ತದೆ. ಮೋದಿ ಅವರು ಆಪ್ತ ಸ್ನೇಹಿತನಿಗಾಗಿ (ಗೌತಮ್ ಅದಾನಿ) ಬಿಹಾರವನ್ನು ಲೂಟಿ ಮಾಡುತ್ತಿದ್ದಾರೆ. ಜತೆಗೆ, ಬಿಹಾರವನ್ನು 'ಬಿಮಾರು ರಾಜ್ಯ'ವನ್ನಾಗಿ ಮಾಡುತ್ತಿದ್ದಾರೆ ಎಂದು ಅವರು ದೂರಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries