ಮುಂಬೈ: ರಾಸಾಯನಿಕ ಕಂಪನಿಯ ಹೆಸರಿನಲ್ಲಿ ಮಾದಕವಸ್ತು ತಯಾರಿಕೆಯಲ್ಲಿ ತೊಡಗಿದ್ದ ತೆಲಂಗಾಣದ 12 ಮಂದಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
'ಮಾದಕವಸ್ತು ತಯಾರಿಕೆಗೆ ಬೇಕಾದ ಕಚ್ಚಾ ವಸ್ತುಗಳನ್ನೂ ವಶಪಡಿಸಿಕೊಳ್ಳಲಾಗಿದೆ. ಇವನ್ನು ಬಳಸಿಕೊಂಡು ಅಂತರರಾಷ್ಟ್ರೀಯ ಮಾರುಕಟ್ಟೆ ಬೆಲೆಯಲ್ಲಿ ಸುಮಾರು ₹12 ಸಾವಿರ ಕೋಟಿ ಮೌಲ್ಯದ ಮಾದಕವಸ್ತು ತಯಾರಿಕೆ ಮಾಡಬಹುದಿತ್ತು' ಎಂದು ಪೊಲೀಸರು ಹೇಳಿದರು.
ಮಾದಕವಸ್ತುಗಳನ್ನು ವಶಪಡಿಸಿಕೊಂಡಿರುವುದಕ್ಕೆ ಸಂಬಂಧಿಸಿದಂತೆ ಇದು ಇಲ್ಲಿಯವರೆಗಿನ ಅತ್ಯಂತ ದೊಡ್ಡ ಪ್ರಕರಣ ಎನ್ನಲಾಗುತ್ತಿದೆ. ಮುಂಬೈನ ಮಾದಕವಸ್ತು ನಿಯಂತ್ರಣ ಘಟಕವು ಈ ಕಾರ್ಯಾಚರಣೆಯನ್ನು ನಡೆಸಿದೆ. ಕಳೆದ ಹಲವು ವರ್ಷಗಳಿಂದ ಈ ಘಟಕದಲ್ಲಿ ನೂರಾರು ಕೆ.ಜಿ 'ಮೆಫೆಡ್ರೋನ್' ಎಂಬ ಮಾದಕವಸ್ತುವನ್ನು ತಯಾರಿಸಿ ಮಾರಾಟ ಮಾಡಲಾಗಿದೆ ಎಂದು ಅಂದಾಜಿಸಲಾಗಿದೆ.
ಮೆಫೆಡ್ರೋನ್ ಅನ್ನು ಹಲವು ಹೆಸರುಗಳಿಂದ ಕರೆಯಲಾಗುತ್ತದೆ. ಉದಾಹರಣೆಗೆ- ಡ್ರೋನ್, ಎಂ-ಕ್ಯಾಟ್, ವೈಟ್ ಮ್ಯಾಜಿಕ್, ಮಿಯಾಂವ್ ಮಿಯಾಂವ್ ಮತ್ತು ಬಬಲ್ ಎಂದು ಕರೆಯಲಾಗುತ್ತದೆ. ಮೆಫೆಡ್ರೋನ್‌ಗೆ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಬೇಡಿಕೆ ಇದೆ.
ಬಾಂಗ್ಲಾದೇಶದ ಮಹಿಳೆ ಫಾತಿಮಾ ಮುರಾದ್ ಶೇಷ್ (23) ಎಂಬುವರನ್ನು ಮುಂಬೈನಲ್ಲಿ ಇಲ್ಲಿನ ಅಪರಾಧ ವಿಭಾಗದ ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. ಈ ಬಳಿಕ ಆಗಸ್ಟ್ 8ರಂದು ಕಾರ್ಯಾಚರಣೆ ಆರಂಭಿಸಲಾಗಿತ್ತು. ಫಾತಿಮಾ ಅವರಿಂದ 105 ಗ್ರಾಂ.ನಷ್ಟು ಮೆಫೆಡ್ರೋನ್ ಮತ್ತು ₹23.97 ಲಕ್ಷ ನಗದನ್ನು ವಶಪಡಿಸಿಕೊಳ್ಳಲಾಗಿತ್ತು.




