ನವದಹೆಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಬ್ರಿಟಿಷ್ ಪ್ರಜೆ ಎಂದು ಆರೋಪಿಸಿ ಅಲಹಾಬಾದ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಕರ್ನಾಟಕದ ಬಿಜೆಪಿ ಕಾರ್ಯಕರ್ತರೊಬ್ಬರಿಗೆ ಜಾರಿ ನಿರ್ದೇಶನಾಲಯ (ಇ.ಡಿ.) ಸಮನ್ಸ್ ಜಾರಿ ಮಾಡಿದೆ ಎಂದು ಮೂಲಗಳು ಶನಿವಾರ ತಿಳಿಸಿವೆ.
ಅರ್ಜಿ ಸಲ್ಲಿಸಿದ್ದ ವ್ಯಕ್ತಿಯನ್ನು ಎಸ್.ವಿಘ್ನೇಶ್ ಶಿಶಿರ್ ಎಂದು ಗುರುತಿಸಲಾಗಿದೆ.
ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯ (FEMA) ನಿಬಂಧನೆಗಳ ಪ್ರಕಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತಾವು ಹೊಂದಿರುವ ಎಲ್ಲ ಸಾಕ್ಷ್ಯಗಳೊಂದಿಗೆ ಸೆಪ್ಟೆಂಬರ್ 9ರಂದು ವಿಚಾರಣೆಗೆ ಹಾಜರಾಗುವಂತೆ ಶಿಶಿರ್‌ಗೆ ಸೂಚಿಸಲಾಗಿದೆ ಎಂದು ಇ.ಡಿ. ಮೂಲಗಳು ಮಾಹಿತಿ ನೀಡಿವೆ.
ರಾಹುಲ್ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ಪ್ರಗತಿಯಲ್ಲಿದೆ ಎಂದೂ ಹೇಳಿವೆ.
ವ್ಯಕ್ತಿಗಳು ಅಥವಾ ಕಂಪನಿಗಳು ವಿದೇಶಿ ವಿನಿಮಯ ಕಾನೂನು ಉಲ್ಲಂಘನೆಗೆ ಸಂಬಂಧಿಸಿದ ಪ್ರಕರಣಗಳನ್ನು FEMA ಕಾಯ್ದೆ ಅಡಿಯಲ್ಲಿ ಇ.ಡಿ. ತನಿಖೆ ನಡೆಸುತ್ತದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಲು ಕಾಂಗ್ರೆಸ್ ನಿರಾಕರಿಸಿದೆ.
ಶಿಶಿರ್ ಅರ್ಜಿಯಲ್ಲಿ ಏನಿದೆ?
ಲೋಕಸಭೆಯ ವಿರೋಧ ಪಕ್ಷದ ನಾಯಕರೂ ಆಗಿರುವ ರಾಹುಲ್ ಗಾಂಧಿ ಅವರು ಬ್ರಿಟಿಷ್ ಪ್ರಜೆ ಎಂಬುದನ್ನು ಸಾಬೀತು ಮಾಡುವ ದಾಖಲೆಗಳು ಮತ್ತು ಬ್ರಿಟನ್ ಸರ್ಕಾರದ ಕೆಲವು ಇ-ಮೇಲ್‌ಗಳು ತಮ್ಮ ಬಳಿ ಇವೆ. ಹಾಗಾಗಿ, ಅವರು ಭಾರತದ ಚುನಾವಣೆಗಳಲ್ಲಿ ಸ್ಪರ್ಧಿಸಲು ಅನರ್ಹ ಎಂಬುದಾಗಿ ಶಿಶಿರ್ ಅವರು ಅಲಹಾಬಾದ್ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ.
ಇದರ ಬೆನ್ನಲ್ಲೇ, ಶಿಶಿರ್‌ಗೆ 24/7 ಸೂಕ್ತ ಭದ್ರತೆ ಒದಗಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಆಗಸ್ಟ್ 30ರಂದು ಸೂಚಿಸಿತ್ತು.
ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್ 9ಕ್ಕೆ ಮುಂದೂಡಲಾಗಿದೆ.




