ಕಾಸರಗೋಡು: ಕೇರಳ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಆಯೋಜಿಸುತ್ತಿರುವ 'ಚಾಂಪಿಯನ್ಸ್ ಬೋಟ್ ಲೀಗ್-2025' ಸ್ಪರ್ಧೆ ಅಕ್ಟೋಬರ್ 12 ರಂದು ಕಾಸರಗೋಡು ಜಿಲ್ಲೆಯ ತ್ರಿಕರಿಪುರ ಕ್ಷೇತ್ರದ ಅಚ್ಚಾಂತುರ್ತಿ-ಕೊಟ್ಟಪುರಂ ಸೇತುವೆಯ ಬಳಿ ಮೊದಲ ಬಾರಿಗೆ ನಡೆಯಲಿದೆ.
ಅರ್ಧ ಶತಮಾನಕ್ಕೂ ಹೆಚ್ಚು ಇತಿಹಾಸ ಹೊಂದಿರುವ ಮತ್ತು ಮಲಬಾರ್‍ನಲ್ಲಿ ಮೊದಲ ದೋಣಿ ಸ್ಪರ್ಧೆಯಾದ ಉತ್ತರ ಮಲಬಾರ್ ಜಲ ಉತ್ಸವವನ್ನು ಚಾಂಪಿಯನ್ಸ್ ಬೋಟ್ ಲೀಗ್‍ನಲ್ಲಿ ಸೇರಿಸುವುದರೊಂದಿಗೆ, ದೋಣಿ ಸ್ಪರ್ಧೆಯನ್ನು ಪ್ರವಾಸೋದ್ಯಮಕ್ಕೆ ಉತ್ತೇಜನಕಾರಿಯಾಗಿ ನಡೆಸಲು ಸರ್ಕಾರ ಮುಂದಾಗಿದೆ.
ಕಾರ್ಯಕ್ರಮದ ಯಶಸ್ಸಿಗಾಗಿ ಸ್ವಾಗತ ಸಮಿತಿ ರಚನಾ ಸಭೆ ಆಯೋಜಿಸಲಾಯಿತು. ಶಾಸಕ ಎಂ ರಾಜಗೋಪಾಲನ್ ಉದ್ಘಾಟಿಸಿದರು. ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಅಧ್ಯಕ್ಷತೆ ವಹಿಸಿದ್ದರು. ಚೆರುವತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಿ ವಿ ಪ್ರಮೀಳಾ, ನೀಲೇಶ್ವರ ಪುರಸಭೆ ಅಧ್ಯಕ್ಷೆ ಟಿ ವಿ ಶಾಂತಾ, ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಜೆ.ಸಜಿತ್, ಚೆರುವತ್ತೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪಿ.ವಿ. ರಾಘವನ್, ನೀಲೇಶ್ವರಂ ಪುರಸಭೆ ಉಪಾಧ್ಯಕ್ಷ ಪಿ.ಪಿ. ಮಹಮ್ಮದ್ ರಫಿ, ನೀಲೇಶ್ವರಂ ಬ್ಲಾಕ್ ಪಂಚಾಯಿತಿ ಸದಸ್ಯರು, ಚೆರುವತ್ತೂರು ಗ್ರಾ.ಪಂ ಸದಸ್ಯರು,ನೀಲೇಶ್ವರ ನಗರಸಭಾ ಸದಸ್ಯರು ಅಧಿಕಾರಿಗಳು, ವಿವಿಧ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕøತಿಕ ಸಂಘಟನೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಈ ಸಂದರ್ಭ ಶಾಸಕ ರಾಜಗೋಪಾಲನ್ ಅಧ್ಯಕ್ಷ ಮತ್ತು ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಸಂಚಾಲಕರಾಗಿರುವ ಸಂಘಟನಾ ಸಮಿತಿಯನ್ನು ರಚಿಸಲಾಯಿತು. ಚೆರುವತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸಿ.ವಿ. ಪ್ರಮೀಳಾ ಸ್ವಾಗತಿಸಿದರು. ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ನಸೀಬ್ ವಂದಿಸಿದರು.


