ಕಾಸರಗೋಡು: ಹದಿನಾರರ ಹರೆಯದ ಬಾಲಕಗೆ ಸಲಿಂಗ ಕಿರುಕುಳ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿ ರಾಜಕೀಯ ಮುಖಂಡರೂ ಒಳಗೊಂಡಂತೆ 14ಮಂದಿ ವಿರುದ್ಧ ಚಂದೇರ ಹಾಗೂ ಇತರ ಠಾಣೆಗಳ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಇವರಲ್ಲಿ ಒಂಬತ್ತು ಮಂದಿಯನ್ನು ಈಗಾಗಲೇ ಸೆರೆಹಿಡಿಯಲಾಗಿದೆ.
ಇವರಲ್ಲಿ ಎಂಟು ಮಂದಿ ಚಂದೇರ ಪೊಲೀಸ್ ಠಾಣೆ ವ್ಯಾಪ್ತಿಯವರಾಗಿದ್ದರೆ, ಉಳಿದ ಆರು ಮಂದಿ ಕಣ್ಣೂರು, ಕೋಯಿಕ್ಕೋಡ್ ಹಾಗೂ ಎರ್ನಾಕುಳಂ ನಿವಾಸಿಗಳಾಗಿದ್ದಾರೆ. ಡೇಟಿಂಗ್ ಆ್ಯಪ್ ಬಳಸಿ, ಆರೋಪಿಗಳು ಬಾಲಕನನ್ನು ಪರಿಚಯಮಾಡಿಕೊಂಡು ಕಳೆದ ಎರಡು ವರ್ಷಗಳಿಂದ ಕಿರುಕುಳ ನೀಡುವ ಮೂಲಕ ತಮ್ಮ ಕಾಮತೃಷೆ ತೀರಿಸಿಕೊಳ್ಳುತ್ತಿದ್ದರೆನ್ನಲಾಗಿದೆ.
ಕಾಸರಗೋಡು ಜಿಲ್ಲೆಯಲ್ಲಿ ಹಾಗೂ ಜಿಲ್ಲೆಯಿಂದ ಹೊರಗೂ ಕರೆದೊಯ್ದು ಬಾಲಕಗೆ ಕಿರುಕುಳ ನೀಡಲಾಗಿದೆ. ಇತ್ತೀಚೆಗೆ ಬಾಲಕನ ಮನೆಗೆ ವ್ಯಕ್ತಿಯೊಬ್ಬ ಆಗಮಿಸಿದ್ದು, ಬಾಲಕನ ತಾಯಿಯನ್ನು ಕಂಡ ತಕ್ಷಣ ಆರೋಪಿ ಓಡಿ ಪರಾರಿಯಾಗಿದ್ದನು. ಈ ಬಗ್ಗೆ ಸಂಶಯಗೊಂಡ ತಾಯಿ ಚಂದೇರ ಠಾಣೆ ಪೊಲೀಸರಿಗೆ ದೂರು ನೀಡಿದಾಗ ವಿಷಯ ಬಹಿರಂಗಗೊಂಡಿದೆ. ಚೈಲ್ಡ್‍ಲೈನ್ ಅಧಿಕಾರಿಗಳಿಗೆ ಲಭಿಸಿದ ಮಾಹಿತಿಯನ್ವಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ವಿ ವಿಜಯಭರತ್ ರೆಡ್ಡಿ ಅವರ ನಿರ್ದೇಶ ಪ್ರಕಾರ ಚಂದೇರ, ವೆಳ್ಳರಿಕುಂಡು, ಚೀಮೇನಿ, ನೀಲೇಶ್ವರ, ಚಿತ್ತಾರಿಕಲ್ ಪೊಲೀಸ್ ಠಾಣೆ ಇನ್ಸ್‍ಪೆಕ್ಟರ್‍ಗಳ ನೇತೃತ್ವದಲ್ಲಿ ತನಿಖೆಗೆ ಚಾಲನೆ ನೀಡಲಾಗಿತ್ತು. ಒಟ್ಟು ಆರೋಪಿಗಳ ಪೈಕಿ ತಲಾ ಇಬ್ಬರು ಆರೋಪಿಗಳನ್ನು ಬಂಧಿಸುವ ಜವಾಬ್ದಾರಿ ಇವರಿಗೆ ವಹಿಸಿಕೊಡಲಾಗಿದೆ. ಶಿಕ್ಷಣ ಇಲಾಖೆ ಸಿಬ್ಬಂದಿ, ಆರ್‍ಪಿಎಫ್ ಅಧಿಕಾರಿಗಳು, ರಾಜಕೀಯ ಮುಖಂಡರು ಆರೋಪಿಗಳ ಪಟ್ಟಿಯಲ್ಲಿ ಒಳಗೊಂಡಿದ್ದಾರೆ.




