HEALTH TIPS

2025ರ ಕೊಡಗಿನ ಗೌರಮ್ಮ ಕಥಾಸ್ಪರ್ಧೆ-ದತ್ತಿನಿಧಿ ಪ್ರಶಸ್ತಿ ಪ್ರಕಟ

ಬದಿಯಡ್ಕ: ಕೊಡಗಿನ ಗೌರಮ್ಮ ಕಥಾಸ್ಪರ್ಧೆ 2025ರ ಫಲಿತಾಂಶ ಪ್ರಕಟಿಸಲಾಗಿದೆ. ಮಹಿಳೆಯರಿಗಾಗಿ ಹವ್ಯಕ ಭಾಷೆಯಲ್ಲಿ ಪ್ರತಿವರ್ಷ ಈ ಕಥಾಸ್ಪರ್ಧೆ ನಡೆದುಬರುತ್ತಿದೆ. ಕನ್ನಡ ಸಾರಸ್ವತ ಲೋಕದ ಮಿನುಗು ತಾರೆ `ಕೊಡಗಿನ ಗೌರಮ್ಮ' ಹೆಸರಿನಲ್ಲಿ ಸ್ಥಾಪಿತವಾಗಿರುವ ದತ್ತಿ ಪ್ರಶಸ್ತಿಯು ಈ ಬಾರಿ ಲೇಖಕಿ ಭಾರತಿ ಕೊಡ್ವಕರೆ ಅವರಿಗೆ ಲಭಿಸಿದೆ. ಅವರು ಬರೆದ `ದಿನಚರಿ ಪುಸ್ತಕ ರಹಸ್ಯ'ಕ್ಕೆ ಪ್ರಥಮ ಲಭಿಸಿರುತ್ತದೆ. ಇವರು ಕೇಶವ ಪ್ರಸಾದ್ ಕೊಡ್ವಕರೆ ಇವರ ಪತ್ನಿ, ನೀರ್ಚಾಲು ಸಮೀಪದ ಕೊಡ್ವಕರೆಯಲ್ಲಿ ವಾಸಿಸುತ್ತಿದ್ದಾರೆ. ಕಥೆ, ಕವನ , ಹಾಸ್ಯ ಕಥೆಗಳನ್ನು ಬರೆಯುವುದು ಇವರ ನೆಚ್ಚಿನ ಹವ್ಯಾಸವಾಗಿದೆ. ಇವರ ಮೂರು ಕಾದಂಬರಿಗಳು ಪ್ರಕಟಗೊಂಡಿವೆ.

ಶಿಕ್ಷಕಿ ಸುಶೀಲಾ.ಕೆ.ಪದ್ಯಾಣ ಅವರ `ಯೋಗಾಯೋಗ ಕೂಡ್ಯಪ್ಪಗ' ಕಥೆಗೆ ದ್ವಿತೀಯ ಲಭಿಸಿರುತ್ತದೆ. ಇವರು ಹಿಂದೂ ಎ ಯು ಪಿ ಶಾಲೆ ಚಿಪ್ಪಾರು ಇಲ್ಲಿನ ನಿವೃತ್ತ ಶಿಕ್ಷಕ ಪದ್ಯಾಣ ಚಂದ್ರಶೇಖರ್ ಭಟ್ ಅವರ ಪತ್ನಿ. ಪ್ರಸ್ತುತ ನೀರ್ಚಾಲಿನಲ್ಲಿ ವಾಸಿಸುತ್ತಿರುವ ಇವರು ಪೆರಡಾಲ ನವಜೀವನ ಪ್ರೌಢಶಾಲೆಯ ಕನ್ನಡ ಅಧ್ಯಾಪಿಕೆ. ಕನ್ನಡದಲ್ಲಿ ಕಥೆ, ಕವನಗಳನ್ನು ಬರೆಯುವ ಹವ್ಯಾಸ ಇರುವ ಇವರ ಹಲವು ರಚನೆಗಳು ನಾಡಿನ ಪ್ರಸಿದ್ಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಮಂಗಳೂರು ಆಕಾಶವಾಣಿಯಲ್ಲಿ ಎರಡು ವರ್ಷಗಳ ಕಾಲ ಉದ್ಘೋಷಕಿಯಾಗಿ, ನಿರೂಪಕಿಯಾಗಿ, ಕಾರ್ಯನಿರ್ವಹಿಸಿದ ಇವರ ಹಲವು ಭಾಷಣಗಳು, ಲೇಖನಗಳು, ಕವನಗಳು ಮಂಗಳೂರು ಆಕಾಶವಾಣಿಯಿಂದ ಬಿತ್ತರಗೊಂಡಿವೆ. ನೀಡಿರುವ ಚಿತ್ರ, ಅಥವಾ ವಿಷಯಕ್ಕೆ ಒಳಗೊಂಡಂತೆ  ಷಟ್ಪದಿ ಕವನಗಳನ್ನು ರಚಿಸುವುದು ಇವರ ವಿಶೇಷವಾದ ಹವ್ಯಾಸವಾಗಿದೆ. 

`ತುತ್ತು ಅನ್ನ ಹಿಡಿಯಷ್ಟು ಜಾಗ' ಕಥೆಗೆ ಶಿರಸಿ ಸೋಮನಹಳ್ಳಿಯ ಕಲ್ಪನಾ ಪ್ರಭಾಕರ ಹೆಗಡೆ ಇವರಿಗೆ ತೃತೀಯ ಲಭಿಸಿದೆ. ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಕೆಲವು ವರ್ಷಗಳ ಕಾಲ ಉದ್ಯೋಗಿಯಾಗಿದ್ದ ಇವರು ಪ್ರಸ್ತುತ ಮಲೆನಾಡಿನ ಹಳ್ಳಿಮನೆಯಲ್ಲಿ ಪತಿ ಪ್ರಭಾಕರ ಹೆಗಡೆಯೊಂದಿಗೆ ಗೃಹಿಣಿಯಾಗಿದ್ದಾರೆ. ಇವರು ಆಕಾಶವಾಣಿ ಧಾರವಾಡ ಹಾಗೂ ಕಾರವಾರಗಳಿಗೆ ಕಥೆ, ಲೇಖನ, ಕವನ, ಚಿಂತನಗಳನ್ನು ಕೊಡುತ್ತಿದ್ದು, ತುಷಾರ, ತರಂಗ, ಕರ್ಮವೀರ, ಮಂಜುವಾಣಿ, ಉತ್ಥಾನ ಮೊದಲಾದ ಪತ್ರಿಕೆಗಳಲ್ಲಿ ಇವರ ಬರಹಗಳು ನಿರಂತರ ಪ್ರಕಟವಾಗುತ್ತಿವೆ. ಈ ಹಿಂದೆಯೂ ಇವರು ಕೊಡಗಿನ ಗೌರಮ್ಮ ಕಥಾಸ್ಪರ್ಧೆಯಲ್ಲಿ ಭಾಗವಹಿಸಿ ತೃತೀಯ ಬಹುಮಾನ ಪಡೆದಿದ್ದರು. 

ಸಾಹಿತಿ, ಶಿಕ್ಷಣತಜ್ಞ ವಿ.ಬಿ.ಕುಳಮರ್ವ ಕುಂಬಳೆ, ಅಧ್ಯಾಪಕ ನಾರಾಯಣ ಹೆಗ್ಡೆ ಮುಜುಂಗಾವು, ಸಾಹಿತಿ ವಿಜಯಾಸುಬ್ರಹ್ಮಣ್ಯ ಕುಂಬಳೆ ಕಥೆಗಳ ಮೌಲ್ಯಮಾಪನ ಮಾಡಿದ್ದಾರೆ ಎಂದು ಕಥಾಸ್ಪರ್ಧೆಯ ಸಂಚಾಲಕಿ ಧನ್ಯಶ್ರೀ ಸರಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries