ಬದಿಯಡ್ಕ: ವಿಕಲಚೇತನ ಬಹುಮುಖ ಪ್ರತಿಭೆ ಬಾರಡ್ಕ ನಿವಾಸಿ ಸತೀಶ ಮತ್ತು ರಜಿತಾ ಇವರ ಪುತ್ರಿ ಜಿಶಾಮೋಳ್‍ಗೆ ವಿದ್ಯಾಭ್ಯಾಸದ ಅಗತ್ಯಕ್ಕಾಗಿ ಲ್ಯಾಪ್‍ಟಾಪ್‍ನ್ನು ನೀಡಲಾಯಿತು. ಭಾನುವಾರ ಬದಿಯಡ್ಕ ಶ್ರೀ ಗಣೇಶಮಂದಿರದಲ್ಲಿ ಬಾಲಗೋಕುಲ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ಬದಿಯಡ್ಕ ಮತ್ತು ಅಟಲ್‍ಜಿ ಸೇವಾ ಸಂಘ್ ಚಾರಿಟೇಬಲ್ ಟ್ರಸ್ಟ್ ಬದಿಯಡ್ಕ ಇವರ ನೇತೃತ್ವದಲ್ಲಿ ನೀಡಿದ ಲ್ಯಾಪ್‍ಟಾಪ್‍ನ್ನು ಗಣ್ಯರು ಹಸ್ತಾಂತರಿಸಿದರು.
ಸಮಿತಿಯ ಗೌರವಾಧ್ಯಕ್ಷ ಪೆರುಮುಂಡ ಶಂಕರನಾರಾಯಣ ಭಟ್ ಅಧ್ಯಕ್ಷತೆ ವಹಿಸಿದ್ದರು. ವಿಟ್ಲ ಮೈತ್ರೇಯಿ ಗುರುಕುಲದ ವ್ಯವಸ್ಥಾಪಕ ಜಗನ್ನಾಥ ಕಾಸರಗೋಡು ಉದ್ಘಾಟಿಸಿದರು. ಬಾಲಗೋಕುಲದ ಜಿಲ್ಲಾ ರಕ್ಷಾಧಿಕಾರಿ ಶಂಕರನಾರಾಯಣ ಭಟ್ ಕಾಸರಗೋಡು ಶುಭ ಹಾರೈಸಿದರು. ಪ್ಲಸ್ ವನ್ ವಿದ್ಯಾರ್ಥಿನಿಯಾಗಿರುವ ಜಿಶಾಮೋಳ್ ಬಾರಡ್ಕ ರಾಜ್ಯ ಬ್ಲೈಂಡ್ ಚೆಸ್ ತಂಡ, ಫುಟ್ ಬಾಲ್ ಹಾಗೂ ಕ್ರಿಕೆಟ್ ತಂಡದ ಸದಸ್ಯೆಯಾಗಿದ್ದಾಳೆ. ಶಾಸ್ತ್ರೀಯ ಸಂಗೀತದಲ್ಲಿ ರಾಜ್ಯಮಟ್ಟದ ವಿಶೇಷ ಶಾಲಾ ಕಲೋತ್ಸವದಲ್ಲಿ ವಿಜೇತೆಯಾಗಿದ್ದಾಳೆ. ಪ್ರಬಂಧ, ಕಥೆಗಳನ್ನೂ ಬರೆಯುವ ಈಕೆ ಬಹುಮುಖ ಪ್ರತಿಭೆಯಾಗಿದ್ದಾಳೆ.





