ಕಾಸರಗೋಡು: ದೀರ್ಘ ಕಾಲದ ಕಾಯುವಿಕೆಯ ನಂತರ ಕಾಸರಗೋಡು ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಎಂಬಿಬೆಸ್ ತರಗತಿ ಆರಂಭಿಸಲು ಕೇಂದ್ರದ ಹಸಿರುನಿಶಾನಿ ಲಭಿಸಿದೆ. ಕಾಸರಹಗೋಡು ಸೇರಿದಂತೆ ಕೇರಳದ ಎರಡು ವೈದ್ಯಕೀಯ ಕಾಲೇಜುಗಳಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗದಿಂದ ಅನುಮೋದನೆ ದೊರೆತಿದ್ದು, ಮೊದಲ ಬ್ಯಾಚ್‍ನ ತರಗತಿ ಸೆ. 22ರಂದು ಆರಂಭಗೊಳ್ಳಲಿದೆ. ಮೊದಲ ಹಂತದಲ್ಲಿ 50ಸೀಟುಗಳಿಗೆ ಪ್ರವೇಶಾತಿ ಲಭಿಸಲಿದೆ. ಪೂರ್ವನಿಗದಿಯಂತೆ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಎಂಬಿಬಿಎಸ್ ತರಗತಿ ಆರಂಭಗೊಳ್ಳಲಿದೆ.
ಉಕ್ಕಿನಡ್ಕದಲ್ಲಿ ನಿರ್ಮಾಣಹಂತದಲ್ಲಿರುವ 220ಹಾಸಿಗೆಗಳ ಸುಸಜ್ಜಿತ ಕಾಸರಗೋಡು ವೈದ್ಯಕೀಯ ಕಾಲೇಜು ಆಸ್ಪತ್ರೆ ಕಟ್ಟಡ ಕಾಮಗಾರಿ ಪೂರ್ತಿಗೊಳ್ಳಲು ಇನ್ನೂ ಕಾಲಾವಕಾಶ ತಗಲುವ ಹಿನ್ನೆಲೆಯಲ್ಲಿ ಕಾಸರಗೋಡಿನ ಜನರಲ್ ಆಸ್ಪತ್ರೆಯಲ್ಲಿ ಎಂಬಿಬಿಎಸ್ ಕೋರ್ಸ್ ಆರಂಭಿಸಲಾಗುತ್ತಿದೆ. ಹೊಸದಾಗಿ ಆರಂಭಗೊಳ್ಳುವ ಆಸ್ಪತ್ರೆಗೆ ಮೂರು ವರ್ಷಗಳ ಸೇವಾ ಅನುಭವ ಹೊಂದಿದ್ದಲ್ಲಿ ಮಾತ್ರ ವೈದ್ಯಕೀಯ ಕಾಲೇಜು ಆಸ್ಪತ್ರೆ ಆರಂಭಿಸಲು ಅನುಮತಿ ಲಭ್ಯವಾಘುವುದಾಗಿ ಮಾನದಂಡವಿದೆ. ಉಕ್ಕಿನಡ್ಕದ ವೈದ್ಯಕೀಯ ಕಾಲೆಜು ಆಸ್ಪತ್ರೆ ಕಾಮಗಾರಿ ನಿಧಾನಗತಿಯಿಂದ ಸಾಗುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿ ಮಾನದಂಡ ಪ್ರಕಾರ ರೋಗಿಗಳನ್ನು ದಾಖಲಿಸಿ ಚಿಕಿತ್ಸೆ ನಿಡುವ ರೀತಿಯಲ್ಲಿ ಆಸ್ಪತ್ರೆ ಕಟ್ಟಡ ಪೂರ್ಣಪ್ರಮಾಣದಲ್ಲಿ ತಲೆಯೆತ್ತಬೇಕಾದರೆ ಇನ್ನಷ್ಟು ಕಾಲಾವಕಾಶ ಬೇಕಾಗಿಬರಲಿದೆ. ವೈದ್ಯಕೀಯ ಕಾಲೇಜು ಆಸ್ಪತ್ರೆ ಆರಂಭಗೊಳ್ಳಬೇಕಾದರೆ ಮತ್ತೆ ಮೂರು ವರ್ಷ ಕಾಲ ಕಾಯಬೇಕು. ಈ ವಿಳಂಬ ತಪ್ಪಿಸಲು ಸರ್ಕಾರ ಕಾಸರಗೊಡು ಜನರಲ್ ಆಸ್ಪತ್ರೆಯನ್ನು ಉಕ್ಕಿನಡ್ಕದ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಭಾಗವಾಗಿ ಮುಂದುವರಿಸಿದ ನಂತರ ಉಕ್ಕಿನಡ್ಕದ ಕಟ್ಟಡ ಕಾಮಗಾರಿ ಶೀಘ್ರ ಪೂರ್ತಿಗೊಳಿಸಿ ಅಲ್ಲೇ ವೈದ್ಯಕೀಯ ಕಾಲೇಜು ಆಸ್ಪತ್ರೆ ಮುಂದುವರಿಸಲು ತೀರ್ಮಾನಿಸಿದೆ.
ಮೊದಲ ವರ್ಷದ ಸಿಲೆಬಸ್ ಪ್ರಕಾರ ಥಿಯರಿ ತರಗತಿ ಆರಂಭ:
ಕಾಸರಗೋಡು ವೈದ್ಯಕೀಯ ಕಾಲೇಜಿನ ನಿರ್ಮಾಣ ಕಾರ್ಯಕ್ಕಾಗಿ ಕೆಐಐಎಫ್‍ಬಿ ನಿಧಿಯಿಂದ 160 ಕೋಟಿ ರೂ.ಗಳ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಆಸ್ಪತ್ರೆ ಬ್ಲಾಕ್ ನಿರ್ಮಾಣ ಪ್ರಗತಿಯಲ್ಲಿದೆ. ಶೈಕ್ಷಣಿಕ ಬ್ಲಾಕ್ ಕಟ್ಟಡ ಈಗಾಘಲೇ ಪೂರ್ಣಗೊಂಡಿದ್ದು, ವೈದ್ಯಕೀಯ ಕಾಲೇಜಿಗೆ ನೀರು ಸರಬರಾಜು ವ್ಯವಸ್ಥೆಗೆ ರೂ. 8 ಕೋಟಿ ಹಂಚಿಕೆ ಮಾಡಲಾಗಿದೆ. ನರವಿಜ್ಞಾನ ವಿಭಾಗ ಸೇರಿದಂತೆ ಹಂತ ಹಂತವಾಗಿ ವಿಶೇಷ ಸೇವೆಗಳನ್ನು ಒದಗಿಸಲಾಗುತ್ತಿದೆ. 60 ಸೀಟುಗಳೊಂದಿಗೆ ನಸಿರ್ಂಗ್ ಕಾಲೇಜನ್ನು ಪ್ರಾರಂಭಿಸಲಾಗಿದೆ. 29 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಹಾಸ್ಟೆಲ್ ನಿರ್ಮಾಣ ಅಂತಿಮಹಂತದಲ್ಲಿದೆ. 273 ಹುದ್ದೆಗಳನ್ನು ಸೃಷ್ಟಿಸಿ ಭರ್ತಿ ಮಾಡಲಾಗಿದೆ. ಜನರಲ್ ಮೆಡಿಸಿನ್, ಪೀಡಿಯಾಟ್ರಿಕ್ಸ್, ಪೆಥಾಲಜಿ, ನ್ಯೂರಾಲಜಿ, ನೆಫ್ರಾಲಜಿ, ಕಮ್ಯುನಿಟಿ ಮೆಡಿಸಿನ್, ಡರ್ಮಟಾಲಜಿ, ಇಎನ್‍ಟಿ, ರೆಸ್ಪಿರೇಟರಿ ವೈದ್ಯಕೀಯ ಸೇರಿದಂತೆ ವಿವಿಧ ವಿಭಾಗಗಳನ್ನು ಆರಂಭಿಸಲಾಗಿದೆ. ಇ-ಸಂಜೀವಿನಿ ಟೆಲಿಮೆಡಿಸಿನ್ ಸೇವೆಗಳನ್ನೂ ಒದಗಿಸಲಾಗಿದೆ. ಈಗಾಗಲೇ ಪ್ರಾಂಶುಪಾಲರನ್ನು ನೇಮಿಸಲಾಗಿದೆ.
2013ರಲ್ಲಿ ಅಂದಿನ ಊಮನ್‍ಚಾಂಡಿ ನೇತೃತ್ವದ ಐಕ್ಯರಂಗ ಸರ್ಕಾರ ಕಾಲಾವಧಿಯಲ್ಲಿ ಶಿಲಾನ್ಯಾಸ ನಡೆಸಲಾಗಿದ್ದು, ಮೂರು ವರ್ಷದಲ್ಲಿ ಪೂರ್ತಿಗೊಳ್ಳಬೇಕಾಗಿದ್ದ ಕಾಮಗಾರಿ, 13ವರ್ಷ ಸಮೀಪಿಸುತ್ತಿದ್ದರೂ, ಪೂರ್ತಿಗೊಳ್ಳದಿರುವ ಬಗ್ಗೆ ಜಿಲ್ಲೆಯ ಎಂಡೋಸಲ್ಫಾನ್ ದುಷ್ಪರಿಣಾಮಪೀಡಿತರು ಹಾಗೂ ಇತರ ರಾಜ್ಯಗಳನ್ನು ಆಶ್ರಯಿಸುತ್ತಿರುವ ರೋಗಿಗಳು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಅಭಿಮತ:
ವಯನಾಡ್ ಮತ್ತು ಕಾಸರಗೋಡು ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಅನುಮೋದನೆ ದೊರೆತಿದೆ. 50ಎಂಬಿಬಿಎಸ್ ಸೀಟುಗಳನ್ನು ಅನುಮೋದಿಸಲಾಗಿದ್ದು, ಎನ್‍ಎಂಸಿ ಮಾನದಂಡಗಳ ಪ್ರಕಾರ ಮೂಲ ಸೌಲಭ್ಯಮತ್ತು ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸುವ ಮೂಲಕ ಅನುಮೋದನೆಯನ್ನು ಪಡೆಯಲಾಗಿದೆ. ಈ ಶೈಕ್ಷಣಿಕ ವರ್ಷದಲ್ಲಿ ವಿವಿಧ ಕಾರ್ಯವಿಧಾನಗಳನ್ನು ಅನುಸರಿಸಿ ವಿದ್ಯಾರ್ಥಿಗಳನ್ನು ಪ್ರವೇಶಿಸಲು ಕ್ರಮ ಕೈಗೊಳ್ಳಲಾಗುವುದು. ಕಾಸರಗೋಡು ವೈದ್ಯಕೀಯ ಕಾಲೇಜಿನಲ್ಲಿ ಹಂತ ಹಂತವಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು.
ವೀಣಾ ಜಾರ್ಜ್, ಸಚಿವೆ
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ






