ಕಾಸರಗೋಡು: ಜಿಲ್ಲೆಯ ಎರಡು ಪ್ರಮುಖ ರಸ್ತೆಗಳ ಶೋಚನೀಯಾವಸ್ಥೆ ಬಗೆಹರಿಸುವಂತೆ ಆಗ್ರಹಿಸಿ ಈ ಎರಡೂ ರೂಟಲ್ಲಿ ಸೆ. 29ರಿಂದ ಖಾಸಗಿ ಬಸ್ ಕಾರ್ಮಿಕರು ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ. ಕಾಸರಗೋಡು-ಚೆರ್ಕಳ-ಬದಿಯಡ್ಕ-ಉಕ್ಕಿನಡ್ಕ ಹಾಗೂ ಕಾಸರಗೋಡು-ಚೆರ್ಕಳ-ನೆಲ್ಲಿಕಟ್ಟೆ-ಪೈಕ ರೂಟಲ್ಲಿ ಈ ಮುಷ್ಕರ ನಡೆಯಲಿದೆ.'ಪ್ರೈಡ್'ಬಸ್ ಕಾರ್ಮಿಕರ ಸಂಘಟನೆ ಬದದಿಯಡ್ಕ ವಲಯ ಸಮಿತಿ ಅಧ್ಯಕ್ಷ ಹ್ಯಾರಿಸ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಕಳೆದ ಒಂದು ವರ್ಷದಿಂದ ಈ ರಸ್ತೆ ಅತ್ಯಂತ ಶಿಥಿಲಾವಸ್ಥೆಯಲ್ಲಿದ್ದರೂ, ಲೋಕೋಪಯೋಗಿ ಇಲಾಖೆ ರಸ್ತೆ ದುರಸ್ತಿಗೆ ಮುಂದಾಗದೆ, ಜನರ ಜೀವದೊಂದಿಗೆ ಚೆಲ್ಲಾಟವಾಡುತ್ತಿದೆ. ರಸ್ತೆಯಲ್ಲಿ ಉಂಟಾಗಿರುವ ಬೃಹತ್ ಹೊಂಡಗಳಿಂದ ವಾಹನ ಸಂಚಾರ ದುಸ್ತರವಾಗಿದೆ. ಈ ಹಾದಿಯಾಗಿ ನಿರಂತರ ವಾಹನ ಸಂಚಾರದಿಂದ ವಾಹನ ಚಾಲಕರು ನರಕಯಾತನೆ ಅನುಭವಿಸುತ್ತಿದ್ದಾರೆ. ಈ ಹಾದಿಯಾಗಿ ಸಂಚರಿಸುವ ಖಾಸಗಿ ಬಸ್‍ಗಳು ಬೆಳಗ್ಗೆ ಹಾಗೂ ಸಂಜೆ ವೇಳೆಗೆ ವಿದ್ಯಾರ್ಥಿಗಳಿಂದ ತುಂಬಿಕೊಳ್ಳುತ್ತಿದ್ದು, ಬೃಹತ್ ಹೊಂಡಗಳಿಂದ ಅಪಘಾತ ಸಾಧ್ಯತೆಯೂ ಹೆಚ್ಚಾಗುತ್ತಿರುವುದರಿಂದ ಇಲಾಖೆ ತಕ್ಷಣ ಗಮನ ಹರಿಸಬೇಕು. ಉಕ್ಕಿನಡ್ಕ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಎಂಬಿಬಿಎಸ್ ತರಗತಿ ಆರಂಭಕ್ಕೆ ಈಗಾಗಲೇ ಹಸಿರು ನಿಶಾನಿ ಲಭಿಸಿರುವುದರಿಂದ ಪ್ರಸಕ್ತ ರಸ್ತೆಯನ್ನು ಶೀಘ್ರ ದುರಸ್ತಿಪಡಿಸಲು ಇಲಾಖೆ ಮುಂದಾಗುವಂತೆ ಬಸ್ ಕಾರ್ಮಿಕರ ಸಂಘಟನೆ ಪದಾಧಿಕಾರಿಗಳು ತಿಳಿಸಿದ್ದಾರೆ.
ಚೆರ್ಕಳದಿಂದ ಉಕ್ಕಿನಡ್ಕ ವರೆಗೆ ಹಾಗೂ ನೆಲ್ಲಿಕಟ್ಟೆಯಿಂದ ಜಿಲ್ಲೆಯ ಪ್ರಸಿದ್ಧ ದೇವಾಲಯ ಮಲ್ಲ ಕ್ಷೇತ್ರ ಹಾಗೂ ಮುಳ್ಳೇರಿಯಾ ತೆರಳುವ ಪೈಕ ರಸ್ತೆ ಶಿಥಿಲಾವಸ್ಥೆಯಲ್ಲಿದ್ದು ದುರಸ್ತಿಗಾಗಿ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಿಲ್ಲದಾಗಿದೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆ, 'ಕಿಫ್‍ಬಿ' ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ಮನವಿ ಸಲ್ಲಿಸಿರುವುದಾಗಿ ಹ್ಯಾರಿಸ್ ತಿಳಿಸಿದ್ದಾರೆ.





