ಕರೂರು: ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಅಧ್ಯಕ್ಷ ಹಾಗೂ ಜನಪ್ರಿಯ ನಟ ವಿಜಯ್ ಅವರ ರಾಜ್ಯ ಪ್ರವಾಸದ ಅಂಗವಾಗಿ ಕರೂರಿನಲ್ಲಿ ಶನಿವಾರ ನಡೆದ ಸಾರ್ವಜನಿಕ ಸಭೆಯಲ್ಲಿ ಕಾಲ್ತುಳಿತ ಸಂಭವಿಸಿ ಕನಿಷ್ಠ 31 ಮೃತಪಟ್ಟು, 50ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿದೆ ಎಂದು ವರದಿಯಾಗಿದೆ.
ಮೃತಪಟ್ಟವರಲ್ಲಿ ಮೂವರು ಮಕ್ಕಳು ಕೂಡ ಸೇರಿದ್ದಾರೆ. ಆರಂಭದಲ್ಲಿ 10 ಮಂದಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿತ್ತು. ಬಳಿಕ ಸಾವಿನ ಸಂಖ್ಯೆ ಹೆಚ್ಚಾಗಿದೆ. ಈಗಾಗಲೇ 50ಕ್ಕೂ ಹೆಚ್ಚು ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
"ಇದುವರೆಗೆ ಕನಿಷ್ಠ 31 ಮಂದಿ ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ತಿರುಚಿಯಿಂದ 24 ವೈದ್ಯರು ಮತ್ತು ಸೇಲಂನಿಂದ 20 ವೈದ್ಯರನ್ನು ತುರ್ತಾಗಿ ಕರೂರಿಗೆ ಕಳುಹಿಸಲಾಗಿದೆ," ಎಂದು ತಮಿಳುನಾಡು ಆರೋಗ್ಯ ಸಚಿವ ಮಾ. ಸುಬ್ರಮಣಿಯನ್ ಅವರು ಮಾಧ್ಯಮಗಳಿಗೆ ನೀಡಿದ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.




