ಬದಿಯಡ್ಕ: ಭಗವಂತನ ಕೆಲಸದಲ್ಲಿ ಪೂರ್ಣವಾಗಿ ತೊಡಗಿಸಿಕೊಳ್ಳಲು ಭಜನೆಗೆ ಬಹಳ ಮಹತ್ವವಿದೆ. ಚಾತುರ್ಮಾಸ್ಯ ಕಾಲದಲ್ಲಿ ಬಹಳ ತಂಡಗಳಿಂದ ಭಜನೆ ಸಮರ್ಪಣೆಯಾಗಿದೆ. ಭಗವಂತನಿಗೆ ತನ್ನನ್ನು ಸಮರ್ಪಿಸಲು ಮನುಜರಿಗೆ ಭಜನೆ ಸುಲಭದಾರಿಯಾಗಿದೆ. ಭಗವಂತನ ಸಂಕೀರ್ತನೆಗಿಂತ ದೊಡ್ಡ ಯಜ್ಞವಿಲ್ಲ ಎಂದು ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯರು ಆಶೀರ್ವಚನವನ್ನು ನೀಡಿದರು.
ಜಗದ್ಗುರು ಶಂಕರಾಚಾರ್ಯ ಶ್ರೀ ಎಡನೀರು ಮಠದಲ್ಲಿ ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಪಂಚಮ ಚಾತುರ್ಮಾಸ್ಯದ ಸಂದರ್ಭ 60 ದಿನಗಳ ಕಾಲ ನಡೆದ ಅಖಂಡ ಭಜನಾ ಸಂಕೀರ್ತನೆಯ ಶನಿವಾರ ನಡೆದ ಸಮಾರೋಪ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಮನಸ್ಸು ಶುದ್ಧವಾಗಿರಬೇಕಾದರೆ ಸತ್ಸಂಗ, ಸದ್ವಿಚಾರಗಳು ನಿರಂತರ ಸಿಗಬೇಕು ಎಂದರು. ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಅನುಗ್ರಹ ಭಾಷಣದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಜನೆಯಲ್ಲಿ ತೊಡಗಿಕೊಂಡಿರುವುದು ಉತ್ತಮ ಬೆಳವಣಿಗೆಯಾಗಿದೆ. ಯುವಜನಾಂಗ ಧಾರ್ಮಿಕ ಚಟುವಟಿಕೆಗಳಿಂದ ವಿಮುಖರಾಗಬಾರದು. ಕುಣಿತ ಭಜನೆ, ಕುಳಿತು ಭಜನೆಗಳು ಪ್ರಚಲಿತವಾಗುತ್ತಿರುವುದು ಆಶಾದಾಯಕವಾಗಿದೆ. ಧಾರ್ಮಿಕ ಮೆರವಣಿಗೆಗಳಲ್ಲಿ ಇಂದು ಮಕ್ಕಳು ಕುಣಿತ ಭಜನೆಯಲ್ಲಿ ಭಾಗವಹಿಸುತ್ತಿರುವುದು ಬದಲಾವಣೆಯ ಪರ್ವವಾಗಿದೆ. ಭಜನಾ ಕಾರ್ಯಕ್ರಮಗಳು ಎಲ್ಲ ಸಮಾಜ ಬಾಂಧವರಲ್ಲಿ ಮತ್ತೆ ಜಾಗೃತಿಯನ್ನುಂಟುಮಾಡುವ ಕೆಲಸವನ್ನು ಮಾಡುತ್ತಿದೆ ಎಂದರು.
ಅಖಂಡ ಭಜನಾ ಸೇವೆಯ ನೇತೃತ್ವ ವಹಿಸಿದ್ದ ವೀಣಾ ಕಡಮಣ್ಣಾಯ ದಂಪತಿಗಳನ್ನು ಈ ಸಂದರ್ಭದಲ್ಲಿ ಶ್ರೀಗಳು ಶಾಲು ಹೊದೆಸಿ ಸ್ಮರಣಿಕೆ ಶ್ರೀದೇವರ ಪ್ರಸಾದವನ್ನು ನೀಡಿ ಆಶೀರ್ವದಿಸಿದರು. ಚಾತುರ್ಮಾಸ್ಯ ಸ್ವಾಗತ ಸಮಿತಿಯ ಅಧ್ಯಕ್ಷ ಸುರೇಶ್ ನಾಯಕ್ ಪೂನಾ ಹಿರಿಯ ಗುರುಗಳಾದ ಶ್ರೀ ಕೇಶವಾನಂದ ಭಾರತೀ ಶ್ರೀಗಳಿಗೆ ಭಜನೆ ಎಂಬುದು ಬಹಳ ಪ್ರಿಯವಾದ ವಿಚಾರವಾಗಿದೆ. ಭಗವಂತನ ಸಂಪ್ರೀತಿಗಾಗಿ ನಾಮಸಂಕೀರ್ತನೆಯನ್ನು ಮಾಡುತ್ತೇವೆ ಎಂದರು. ಕೆ.ಗೋಪಾಲಕೃಷ್ಣ ಭಟ್ ಐಎಎಸ್ ಎಡನೀರು ಆಶಯ ಭಾಷಣದಲ್ಲಿ ಅಜ್ಞಾನ ಲೋಕದಿಂದ ಬೆಳಕಿನೆಡೆಗೆ ಮುನ್ನಡೆಸುವವ ಗುರು. ಇದು ನಮ್ಮ ಸಂಸ್ಕಾರ, ಸಂಸ್ಕøತಿ. ಚಿಂತೆಗಳು, ಆಲೋಚನೆಗಳು ನಮ್ಮನ್ನು ಪ್ರಾಪಂಚಿಕ ಬಂಧನದಿಂದ ಬಿಡಿಸಿ ಮೋಕ್ಷದಿಂದ ಕೊಂಡೊಯ್ಯುವುದೇ ಸಂಸ್ಕಾರ. ನಮ್ಮ ದೇಹ ಮನಸ್ಸನ್ನು ಶುದ್ಧಿಗೊಳಿಸುವುದೇ ಸಂಸ್ಕಾರ. ನಮ್ಮ ನಡೆನುಡಿ, ನೋಟ, ಆಚಾರವಿಚಾರಗಳು ನಮ್ಮ ಸಂಸ್ಕಾರದಲ್ಲಿ ಪ್ರತಿಬಿಂಬಿತವಾಗಬೇಕು ಎಂದರು. ಸೂರ್ಯ ಭಟ್ ಎಡನೀರು ನಿರೂಪಿಸಿದರು. ಶ್ರೀಮಠದ ಪ್ರಬಂಧಕ ರಾಜೇಂದ್ರ ಕಲ್ಲೂರಾಯ ಸ್ವಾಗತಿಸಿ, ವೇಣುಗೋಪಾಲ ಮಾಸ್ತರ್ ವಂದಿಸಿದರು.




.jpg)
