ಬದಿಯಡ್ಕ: ಇಂದಿನ ವೇಗದ ಜಗತ್ತಿಗೆ ಚುಟುಕು ಸಾಹಿತ್ಯದ ಅಗತ್ಯ ಇದೆ. ಇಂತಹಾ ಶಿಬಿರಗಳಲ್ಲಿ ಮಕ್ಕಳು ಆಸಕ್ತಿಯಿಂದ ಭಾಗವಹಿಸಬೇಕು. ಕಾಸರಗೋಡಿನ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಈ ಅಭಿಯಾನ ಯೋಜನೆಯು ಶ್ಲಾಘನೀಯ ಎಂದು ಬೇಳ ಸಂತ ಬಾರ್ತಲೋಮೆಯ ಹಿರಿಯ ಬುನಾದಿ ಶಾಲೆಯ ಸಂಚಾಲಕಿ ಸಿಸ್ಟರ್ ಮಾರ್ಸೆಲಿನ್ ಬ್ರಾಗ್ಸ್ ಹೇಳಿದರು.
ಅವರು ಕೇರಳ ರಾಜ್ಯ- ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕಾಸರಗೋಡು ಜಿಲ್ಲಾ ಘಟಕದ ಆಶ್ರಯದಲ್ಲಿ ಶನಿವಾರ ಬೇಳ ಸಂತ ಬಾರ್ತಲೋಮೆಯ ಹಿರಿಯ ಬುನಾದಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನಡೆದ ಕನ್ನಡ ಸಾಹಿತ್ಯ ಮಾರ್ಗದರ್ಶನ ಅಭಿಯಾನದ 6ನೇ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಬೇಳ ಸಂತ ಬಾರ್ತಲೋಮೆಯ ಹಿರಿಯ ಬುನಾದಿ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಎಲಿಜಬೆತ್ ಪಿ.ಎ. ಅಧ್ಯಕ್ಷತೆ ವಹಿಸಿ ಮಾತನಾಡಿ, ಚುಟುಕದಂತಹಾ ಚಿಕ್ಕ ಚಿಕ್ಕ ಕವಿತೆಗಳನ್ನು ಬರೆದು ಮಕ್ಕಳು ಬೆಳೆಯಬೇಕು. ನಿರಂತರ ಬರವಣಿಗೆ ಮತ್ತು ಅಧ್ಯಯನದಿಂದ ಉತ್ತಮ ಬರಹಗಳನ್ನು ರಚಿಸಬಹುದು ಎಂದು ಹೇಳಿದರು.
ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿಯ ಸ್ಥಾಪಕ ಸಂಚಾಲಕ ಡಾ. ಕೆ. ವಾಮನ್ ರಾವ್ ಬೇಕಲ್ ಪ್ರಾಸ್ತಾವಿಕವಾಗಿ ಮಾತನಾಡಿ, ಕಾಸರಗೋಡಿನಲ್ಲಿ ಕನ್ನಡವನ್ನು ಉಳಿಸಿ ಬೆಳೆಸಬೇಕಾದವರು ಮಕ್ಕಳು. ಅವರಲ್ಲಿ ಕನ್ನಡ ಪ್ರೀತಿಯನ್ನು ಶಿಕ್ಷಕರು ಅರಳಿಸಬೇಕು. ಇದಕ್ಕೆ ಮಕ್ಕಳ ಪೋಷಕರು ಮತ್ತು ಕನ್ನಡ ಪರ ಸಂಘಟನೆಗಳು ಬೆಂಬಲಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಕಾಸರಗೋಡಿನ ಕನ್ನಡ ಭವನ ಪ್ರಕಾಶನದ ಮುಖ್ಯಸ್ಥೆ ಸಂಧ್ಯಾರಾಣಿ ಟೀಚರ್, ಕಾಸರಗೋಡಿನ ಕನ್ನಡ ಭವನದ ಕಾರ್ಯದರ್ಶಿ ವಸಂತ ಕೆರೆಮನೆ, ಶಾಲೆಯ ಎಂಪಿಟಿಎ ಅಧ್ಯಕ್ಷೆ ಸರಿತಾ ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶಾಲೆಯ ಅಧಿಕೃತರನ್ನು ಪರಿಷತ್ತಿನ ವತಿಯಿಂದ ಗೌರವಿಸಲಾಯಿತು. ನಂತರ ನಡೆದ ಶಿಬಿರದ ಕವನ ರಚನಾ ತರಬೇತಿಯಲ್ಲಿ ಡಾ. ಕೊಳ್ಚಪ್ಪೆ ಗೋವಿಂದ ಭಟ್ ಹಾಗೂ ಚಿತ್ರರಚನಾ ತರಬೇತಿಯಲ್ಲಿ ಮೋಹನದಾಸ್ ಅನ್ನೆಪಲ್ಲಡ್ಕ ಮಕ್ಕಳಿಗೆ ಮಾರ್ಗದರ್ಶನ ನೀಡಿದರು. ಕಮ್ಮಟದಲ್ಲಿ ಶಿಬಿರಾರ್ಥಿಗಳು ಚಟುವಟಿಕೆಯ ಅಂಗವಾಗಿ ರಚಿಸಿದ 'ಚಿತ್ತಾರ ಸಿರಿ' ಹಾಗೂ 'ಕವನ ಸುಮ' ಎಂಬ ಹಸ್ತಪ್ರತಿಗಳನ್ನು ಬಿಡುಗಡೆ ಮಾಡಲಾಯಿತು. ಶಾಲೆಯ ವಿದ್ಯಾರ್ಥಿನಿಯರಾದ ಮಂಜೂಷಾ ಪಿ, ಶ್ರೇಯಾ ಬಿ, ಅದ್ವಿತೀಯ ರಾಮಚಂದ್ರ ಪ್ರಾರ್ಥಿಸಿದರು. ಶಿಕ್ಷಕ ಸ್ಟೇನಿ ಲೋಬೋ ಸ್ವಾಗತಿಸಿ, ನಿವೃತ್ತ ಶಿಕ್ಷಕಿ ಸಂಧ್ಯಾರಾಣಿ ಟೀಚರ್ ವಂದಿಸಿದರು. ನಿವೃತ್ತ ಶಿಕ್ಷಕಿ ಶಶಿಕಲಾ ಟೀಚರ್ ಕುಂಬಳೆ ಕಾರ್ಯಕ್ರಮ ನಿರೂಪಿಸಿದರು. ಶಿಬಿರದಲ್ಲಿ ಶಾಲೆಯ ಅನೇಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.




.jpg)
.jpg)
.jpg)
