ರಾವಲ್ಪಿಂಡಿ: ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರ ಸಹೋದರಿ ಅಲೀಮಾ ಖಾನ್ ಅವರ ಮೇಲೆ ಮೊಟ್ಟೆ ಎಸೆದ ಘಟನೆ ನಡೆದಿದೆ.
ತೋಷಖಾನಾ ಪ್ರಕರಣದ ವಿಚಾರಣೆ ಮುಗಿದ ನಂತರ ಅವರು ಅದಿಯಾಲ ಜೈಲಿನ ಮುಂಭಾಗದಲ್ಲಿ ಮಾಧ್ಯಮಗಳ ಜೊತೆ ಮಾತನಾಡುವಾಗ ಈ ಘಟನೆ ನಡೆದಿದೆ.ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಘಿ ಹರಿದಾಡುತ್ತಿದೆ.
ಮೊಟ್ಟೆ, ಅಲೀಮಾ ಅವರ ಗಲ್ಲಕ್ಕೆ ಬಡಿದು ನಂತರ ಬಟ್ಟೆಯ ಮೇಲೆ ಬೀಳುವುದನ್ನು ವಿಡಿಯೊದಲ್ಲಿ ಕಾಣಬಹುದು. ಮೊಟ್ಟೆ ದಾಳಿಯಿಂದ ಬೆಚ್ಚಿಬಿದ್ದ ಅಲೀಮಾ ಅವರು ಶಾಂತವಾಗಿ ಪ್ರತಿಕ್ರಿಯಿಸಿ, ಪರವಾಗಿಲ್ಲ ಬಿಡಿ ಎಂದು ಹೇಳುತ್ತಾರೆ.
ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಮಹಿಳೆಯರನ್ನು ಬಂಧಿಸಿದ್ದಾರೆ. ಇವರು ಪಿಟಿಐ ಪಕ್ಷದ ಬೆಂಬಲಿಗರು ಎಂದು ತಿಳಿದುಬಂದಿದೆ.
ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರ ನೀಡದೆ ತಪ್ಪಿಸಿಕೊಂಡ ನಂತರ ಅಲೀಮಾ ಅವರ ಮೇಲೆ ಮೊಟ್ಟೆ ಎಸೆಯಲಾಗಿದೆ ಎಂಬುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ ಎನ್ನಲಾಗಿದೆ.




