HEALTH TIPS

ಬರೋಡಾ ರಾಣಿಗೆ ನೆಹರು ಕಾಯ್ದಿರಿಸಿದ್ದ Rolls-Royceಗಾಗಿ ಜಟಾಪಟಿ: SC ವಿಚ್ಛೇದನ

 ನವದೆಹಲಿ: ಬರೋಡಾದ ರಾಣಿಗಾಗಿ 1951ರಲ್ಲಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಕಾಯ್ದರಿಸಿದ್ದರು ಎನ್ನಲಾದ ಸಂಪೂರ್ಣವಾಗಿ ಕೈಯಲ್ಲೇ ತಯಾರಿಸಿದ ರೋಲ್ಸ್‌ ರಾಯ್ಸ್‌ ಕಾರಿಗಾಗಿ ಪತಿ ಹಾಗೂ ಪತ್ನಿ ನಡುವೆ ಉಂಟಾದ ಕಲಹವನ್ನು ಸುಪ್ರೀಂ ಕೋರ್ಟ್ ವಿಚ್ಛೇದನ ನೀಡಿ ಇತ್ಯರ್ಥಪಡಿಸಿದೆ.

ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್, ಜಾಯ್‌ಮಲ್ಯಾ ಬಗ್ಚಿ ಮತ್ತು ವಿಫುಲ್ ಎಂ. ಪಂಚೋಲಿ ಅವರಿದ್ದ ಪೀಠವು ಅರ್ಜಿಯ ವಿಚಾರಣೆ ನಡೆಸಿತ್ತು. ಅದರಂತೆ ಮಹಿಳೆಗೆ ವಿಚ್ಛೇದನ ನೀಡಿದ ಪತಿಯು ₹2.25 ಕೋಟಿ ಪರಿಹಾರ ನೀಡಬೇಕೆಂದು ಆದೇಶಿಸಿ ಪ್ರಕರಣವನ್ನು ಇತ್ಯರ್ಥಪಡಿಸಿತು.


ಮಹಿಳೆಯು ನಿಶ್ಚಿತಾರ್ಥ ಉಂಗುರ ಸಹಿತ ತಾನು ತನ್ನ ಪತಿಯಿಂದ ಪಡೆದ ಎಲ್ಲಾ ಉಡುಗೊರೆಗಳನ್ನು ಹಿಂತಿರುಗಿಸಬೇಕು. ಇದರೊಂದಿಗೆ ಇವರ ನಡುವೆ ಇರುವ ಎಲ್ಲಾ ವಿವಾದಗಳನ್ನೂ ಬಾರಿಗೆ ಇತ್ಯರ್ಥಪಡಿಸುತ್ತಿರುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ. ಇದರ ನಂತರ ಸಾಮಾಜಿಕ ಮಾಧ್ಯಮದಲ್ಲಿ ಪರಸ್ಪರರನ್ನು ಆರೋಪಿಸಿ ಯಾವುದೇ ಪೋಸ್ಟ್‌ಗಳನ್ನೂ ಹಾಕುವಂತಿಲ್ಲ ಎಂದು ಇಬ್ಬರಿಗೂ ಪೀಠ ತಾಕೀತು ಮಾಡಿದೆ.

ಪ್ರಕರಣ ಏನು..?

ಪ್ರಕರಣದಲ್ಲಿ ವಿಚ್ಛೇದನ ಪಡೆದ ಮಹಿಳೆಯು ಗ್ವಾಲಿಯರ್ ಮೂಲದವರು. ಅವರ ಪೂರ್ವಜರು ಕೊಂಕಣ ಪ್ರಾಂತ್ಯಕ್ಕೆ ಸೇರಿದವರಾಗಿದ್ದು, ಛತ್ರಪತಿ ಶಿವಾಜಿ ಮಹಾರಾಜರ ನೌಕಾಪಡೆಯಲ್ಲಿ ಸೇನಾಪತಿಯಾಗಿದ್ದರು ಎಂದೆನ್ನಲಾಗಿದೆ. ಮತ್ತೊಂದೆಡೆ ಆಕೆಯ ಪತಿಯು ಮಧ್ಯಪ್ರದೇಶದವರಾಗಿದ್ದು, ಸೇನೆಯ ಹಿನ್ನೆಲೆಯವರು. ಸದ್ಯ ಹಲವು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ.

ಇವರಬ್ಬರ ನಡುವೆ ವಿವಾದಕ್ಕೆ ಕಾರಣವಾಗಿದ್ದು 1951ರಲ್ಲಿ ಸಂಪೂರ್ಣ ಕೈಯಿಂದಲೇ ತಯಾರಿಸಲಾದ ರೋಲ್ಸ್‌ ರಾಯ್ಸ್ ಕಾರು. ಈ ಮಾದರಿಯ ಕಾರು ಈವರೆಗೂ ಇರುವುದು ಇದು ಒಂದೇ. ಸದ್ಯ ಇದರ ಬೆಲೆ ₹2.5 ಕೋಟಿ ಎಂದು ಅಂದಾಜಿಸಲಾಗಿದೆ. ಪ್ರಧಾನಿ ನೆಹರು ಅವರು ಈ ಕಾರನ್ನು ಬರೋಡಾದ ರಾಣಿಗಾಗಿ ಆಗ ಕಾಯ್ದರಿಸಿದ್ದರಂತೆ. ಅದು ಸದ್ಯ ಅರ್ಜಿದಾರ ಮಹಿಳೆಯ ತಂದೆಯ ಬಳಿ ಇದೆ.

ಪತಿ ಹಾಗೂ ಅವರ ಮನೆಯವರು ವರದಕ್ಷಿಣ ರೂಪದಲ್ಲಿ ಅವರ ಬಳಿ ಇರುವ ರೋಲ್ಸ್‌ ರಾಯ್ಸ್ ಕಾರು ಮತ್ತು ಮುಂಬೈನಲ್ಲಿ ಫ್ಲಾಟ್ ಕೊಡಬೇಕು ಎಂದು ನಿರಂತರವಾಗಿ ಪೀಡಿಸುತ್ತಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ.

'ಬರೋಡಾದ ಮಹಾರಾಣಿ ಚಿಮ್ನಾ ಬಾಯಿ ಸಾಹಿಬ್ ಗಾಯಕ್‌ವಾಡ್‌ ಅವರ ಪರವಾಗಿ ಪ್ರಧಾನಿ ನೆಹರು ಅವರು ಅವರು ಕಾಯ್ದಿರಿಸಿದ್ದ ಎಚ್‌ಜೆ ಮುಲ್ಲಿನೆರ್ ಅಂಡ್‌ ಆಯಂಪ್‌ ಕಂಪನಿಯು ಕೈಯಿಂದಲೇ ಸಿದ್ಧಪಡಿಸಿದ ರೋಲ್ಸ್‌ ರಾಯ್ಸ್‌ ಕಾರನ್ನೇ ತನಗೆ ಕೊಡಬೇಕು ಎಂದು ಪತಿ ಮತ್ತು ಅವರ ತಂದೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು. ಇದನ್ನು ನಿರಾಕರಿಸಿದಾಗ ತನ್ನ ಶೀಲವನ್ನು ಶಂಕಿಸಿ ಅವಹೇಳನ, ಸುಳ್ಳು ಆರೋಪ ಮಾಡಲಾರಂಭಿಸಿದರು ಹಾಗೂ ವಿವಾಹವನ್ನೇ ನಿರಾಕರಿಸಿದರು' ಎಂದು ಅರ್ಜಿಯಲ್ಲಿ ಹೇಳಿದ್ದಾರೆ.

ಮತ್ತೊಂದೆಡೆ ಮಹಿಳೆ ಹಾಗೂ ಸಂಬಂಧಿಕರು ನಕಲಿ ಸಹಿ ಮಾಡಿ ವಿವಾಹ ಪ್ರಮಾಣಪತ್ರ ಮಾಡಿಕೊಂಡಿದ್ದಾರೆ ಎಂದು ಪತಿಯ ಮನೆಯವರು ಆರೋಪಿಸಿದ್ದರು.

ಇದೇ ವಿಷಯವಾಗಿ 2023ರ ಡಿಸೆಂಬರ್‌ನಲ್ಲಿ ಮಧ್ಯಪ್ರದೇಶ ಹೈಕೋರ್ಟ್ ಆದೇಶ ಹೊರಡಿಸಿ ಮಹಿಳೆಗೆ ವರದಕ್ಷಿಣೆ ಕಿರುಕುಳ ಹಾಗೂ ಹಿಂಸೆ ನೀಡಿದ ಆರೋಪದಿಂದ ಪತಿಯನ್ನು ಮುಕ್ತಗೊಳಿಸಿತ್ತು.

ಈ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಯಿತು. ಆರಂಭದಲ್ಲಿ ಕೇರಳ ಹೈಕೋರ್ಟ್‌ನ ನಿವೃತ್ತಿ ನ್ಯಾಯಮೂರ್ತಿ ಆರ್. ಬಸಂತ್ ಅವರನ್ನು ಮಧ್ಯಸ್ಥಿಗೆದಾರರನ್ನಾಗಿ ಸುಪ್ರೀಂ ಕೋರ್ಟ್ ನೇಮಿಸಿತ್ತು. ಆ. 29ರಂದು ವಿಚ್ಛೇದನ ನೀಡಿ ಸುಪ್ರೀಂ ಕೋರ್ಟ್ ಪ್ರಕರಣ ಇತ್ಯರ್ಥಪಡಿಸಿದೆ.









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries