ಕುಂಬಳೆ: ಕುಂಬಳೆ ಸನಿಹದ ಮುಟ್ಟಂನ ಖಾಸಗಿ ಶಾಲೆಯೊಂದರಲ್ಲಿ ಸಮ್ಮೋಹನ ವಿದ್ಯೆ ಹೆಸರಲ್ಲಿ ಹಿರಿಯ ವಿದ್ಯಾರ್ಥಿಗಳು ನಡೆಸಿದ ಹಲ್ಲೆಯಿಂದ ಮೂವರು ಕಿರಿಯ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಶಾಲಾ ಅಧಿಕಾರಿಗಳು ಹಾಗೂ ಶಿಕ್ಷಕರನ್ನು ಪೊಲೀಸರು ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆದಿದೆ.
ಮುಟ್ಟಂ ಶಾಲೆಯೊಂದರಲ್ಲಿ ಇತ್ತೀಚೆಗೆ ಹಿಪ್ನೋಟಿಸಂ ವಿದ್ಯೆಗೆ ಸಂಬಂಧಿಸಿದ ಘಟನೆ ನಡೆದಿದೆ. ಮೂವರು ಹಿರಿಯ ವಿದ್ಯಾರ್ಥಿಗಳು ಎಂಟನೇ ತರಗತಿಗೆ ಆಗಮಿಸಿ ಸಮ್ಮೋಹನ ವಿದ್ಯೆ ಕಲಿಸುವುದಾಗಿ ಕಿರಿಯ ವಿದ್ಯಾರ್ಥಿಗಳ ಮೇಲೆ ಬಲ ಪ್ರಯೋಗಿಸಿದ್ದಾರೆ. ಇದರಿಂದ ಒಬ್ಬ ವಿದ್ಯಾರ್ಥಿ ಕುಸಿದು ಬಿದ್ದು ತಲೆಗೆ ಗಾಯವುಂಟಾಗಿದ್ದರೆ, ಇತರ ವಿದ್ಯಾರ್ಥಿಗಳಿಗೆ ಕತ್ತು ಹಾಗೂ ಮುಖಕ್ಕೆ ಗಾಯಗಳಾಗಿದೆ. ಇದರಿಂದ ವಿಚಲಿತರಾದ ಇತರ ವಿದ್ಯಾರ್ಥಿಗಳು ಭಯಭೀತರಾದಾಗಿದ್ದಾರೆ. ಇದು ಹಿಪ್ನೋಟಿಸಂ ಆಗಿದ್ದು, ಅಧ್ಯಾಫಕರೇ ಇದನ್ನು ಹೇಳಿಕೊಟ್ಟಿದ್ದಾರೆ. ಭಯಬೀಳಬೇಕಾಗಿಲ್ಲ ಎಂದು ಹಿರಿಯ ವಿದ್ಯಾರ್ಥಿಗಳು ತಿಳಿಸಿದ್ದಾರೆ.
ಶಾಲೆಯಲ್ಲಿ ನಡೆದ ಘಟನೆ ಬಹಿರಂಗಗೊಳ್ಳುತ್ತಿದ್ದಂತೆ ವಿದ್ಯಾರ್ಥಿಗಳ ಪಾಲಕರೂ ಆತಂಕಕ್ಕೊಳಗಾಗಿದ್ದು, ಠಾಣೆಗೆ ಮಾಹಿತಿ ನೀಡಿದ್ದರು. ಶಾಲೆ ಅಧಿಕಾರಿಗಳು, ಶಿಕ್ಷಕರು, ಹಲ್ಲೆ ನಡೆಸಿದ ವಿದ್ಯಾರ್ಥಿಗಳನ್ನು ಠಾಣೆಗೆ ಕರೆಸಿದ ಪೊಲೀಸರು, ಶಾಲೆಯಲ್ಲಿ ಇಂತಹ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಬೇಕು ಹಾಗೂ ಘಟನೆಗೆ ಕಾರಣರಾದ ವಿದ್ಯಾರ್ಥಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.




