ಕಾಸರಗೋಡು: ಬ್ರಹ್ಮೈಕ್ಯ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಕಲಾರಾಧಕರು ಮಾತ್ರವಲ್ಲ ಅವರೊಬ್ಬ ಮನುಷ್ಯ ಸ್ನೇಹಿಯಾಗಿ ಜನಮಾನಸದಲ್ಲಿ ಇಂದಿಗೂ ನೆಲೆ ನಿಂತಿರುವುದಾಗಿ ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ತಿಳಿಸಿದ್ದಾರೆ.
ಅವರು ಎಡನೀರು ಬ್ರಹ್ಮೈಕ್ಯ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಅವರ ಐದನೇ ವರ್ಷದ ಆರಾಧನಾ ಮಹೋತ್ಸವದ ಅಂಗವಾಗಿ ಶ್ರೀ ಮಠದ ಶ್ರೀಭಾರತೀ ಸದನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೇಶವಾನಂದ ಭಾರತೀ ಸ್ವಾಮೀಜಿ ಅವರ ಬಹುಮುಖ ಪ್ರತಿಭೆ, ಅಗಾಧ ಪಾಂಡಿತ್ಯ ಭಕ್ತರನ್ನು ಅವರತ್ತ ಸೆಳೆಯುವಂತೆ ಮಾಡಿದೆ. ಎಡನೀರು ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಅವರ ಭೂಮಸೂದೆಗೆ ಸಂಬಂಧಿಸಿದ ಕಾನೂನು, ದೇಶದ ಕಾನೂನು ವಲಯದಲ್ಲಿ ಮಹಾ ಕ್ರಾಂತಿಗೆ ಕಾರಣವಾಗಿರುವುದಾಗಿ ತಿಳಿಸಿದರು.
ಎಡನೀರು ಮಠಾಧೀಶರಾದ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು ಆಶೀರ್ವಚನ ನೀಡಿದರು. ಕರ್ನಾಟಕ ಸರ್ಕಾರದ ಮಾನವಹಕ್ಕುಗಳ ಆಯೋಗದ ಅಧ್ಯಕ್ಷ ಡಾ. ಶ್ಯಾಮ ಭಟ್ ಐಎಎಸ್ ಗೌರವ ಉಪಸ್ಥಿತರಿದ್ದರು. ಖ್ಯಾತ ಸಂಗೀತ ನಿರ್ದೇಶಕ ವಿ. ಮನೋಹರ್ ಗುರುಸ್ಮರಣೆ ನಡೆಸಿದರು. ಈ ಸಂದರ್ಭ ಕುಮಟಾದ ಶಾಂತಿಕಾಪರಮೇಶ್ವರೀ ದೇವಸ್ಥಾನದ ಮೊಕ್ತೇಸರ, ಸಾಮಾಜಿಕ ಧುರೀಣ ಕೃಷ್ಣ ಬಾಬಾ ಪೈ ಅವರಿಗೆ ಶ್ರೀ ಕೇಶವಾನಂದ ಭಾರತೀ ಸ್ಮøತಿ ಗೌರವ ಪ್ರದಾನ ಮಾಡಲಾಯಿತು. ನಿವೃತ್ತ ಪ್ರಾಂಶುಪಾಲ ರಾಜೇಂದ್ರ ಕಲ್ಲೂರಾಯ ಅಭಿನಂದನಾ ನುಡಿಗಳನ್ನಾಡಿದರು. ರಾಜಾರಾಮ ಎಸ್. ಪೆರ್ಲ ಸನ್ಮಾನ ಪತ್ರ ವಾಚಿಸಿದರು. ಉದ್ಯಮಿ, ಚಾತುರ್ಮಾಸ್ಯ ಸ್ವಾಗತ ಸಮಿತಿ ಅಧ್ಯಕ್ಷ ಸುರೇಶ್ ಕೆ. ನಾಯಕ್ ಪೂನಾ, ಅನ್ನಪೂರ್ಣ ಪೈ ಕುಮ್ಟಾ, ಅಖಿಲ ಭಾರತೀಯ ಕುಟುಂಬ ಪ್ರಬೋಧಕ್ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು. ಕಯ್ಯೂರು ನಾರಾಯಣ ಭಟ್ ಸ್ವಾಗತಿಸಿದರು. ಚಿತ್ರನಟ ಕಾಸರಗೋಡು ಚಿನ್ನಾ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಅಂಗವಾಗಿ ಬಡಗು ತಿಟ್ಟಿನ ಯಕ್ಷಗಾನ ಬಯಲಾಟ'ನಾಗಶ್ರೀ' ಹಾಗೂ ತೆಂಕು ತಿಟ್ಟಿನ ಯಕ್ಷಗಾನ ಬಯಲಾಟ'ಅಗ್ರಪೂಜೆ'ನೆರವೇರಿತು.
ಕುಮಟಾದ ಶಾಂತಿಕಾಪರಮೇಶ್ವರೀ ದೇವಸ್ಥಾನದ ಮೊಕ್ತೇಸರ, ಸಾಮಾಜಿಕ ಧುರೀಣ ಕೃಷ್ಣ ಬಾಬಾ ಪೈ ಅವರಿಗೆ ಶ್ರೀ ಕೇಶವಾನಂದ ಭಾರತೀ ಸ್ಮøತಿ ಗೌರವವನ್ನು ಎಡನೀರುಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಪ್ರದಾನ ಮಾಡಿದರು.





