HEALTH TIPS

ಲಡಾಖ್‌ನಲ್ಲಿ ಕರ್ಫ್ಯೂ ಜಾರಿ

ಲೇಹ್‌: ಲಡಾಖ್‌ಗೆ ರಾಜ್ಯದ ಸ್ಥಾನಮಾನ ನೀಡುವಂತೆ ಆಗ್ರಹಿಸಿ ಲೇಹ್‌ನಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಬೆನ್ನಲ್ಲೇ ಗುರುವಾರ ಕರ್ಫ್ಯೂ ಜಾರಿಗೊಳಿಸಲಾಗಿದೆ.

ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್‌ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಬೆಂಬಲಿಸಿ ಬುಧವಾರ ಲೇಹ್‌ ಅಪೆಕ್ಸ್‌ ಬಾಡಿ (ಎಲ್‌ಎಬಿ) ಬಂದ್‌ಗೆ ಕರೆ ನೀಡಿತ್ತು.

ಈ ವೇಳೆ ಪೊಲೀಸರು ಮತ್ತು ಪ್ರತಿಭಟನಕಾರರ ಮಧ್ಯೆ ಸಂಘರ್ಷ ಉಲ್ಬಣಗೊಂಡು, ನಾಲ್ವರು ಮೃತಪಟ್ಟು, 80ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಘಟನೆಗೆ ಸಂಬಂಧಿಸಿದಂತೆ ಪೊಲೀಸರು 50 ಜನರನ್ನು ಬಂಧಿಸಿದ್ದಾರೆ.

ಕಾರ್ಗಿಲ್‌ ಪ್ರಜಾಸತ್ತಾತ್ಮಕ ಒಕ್ಕೂಟವೂ (ಕೆಡಿಎ) ಬಂದ್‌ಗೆ ಕರೆ ನೀಡಿದ್ದರಿಂದ ಕಾರ್ಗಿಲ್‌, ಲೇಹ್‌, ಜಾಂಗ್‌ಸ್ಕರ್‌, ನುಬ್ರಾ, ಪದಮ್‌, ಚಾಂಗ್‌ತಾಂಗ್‌, ಡ್ರಾಸ್‌, ಲಾಮಾಯುರು ಪ್ರದೇಶಗಳಲ್ಲಿ ಪೊಲೀಸರು ಗುರುವಾರ ಬಿಗಿ ಭದ್ರತೆ ಕೈಗೊಂಡಿದ್ದರು. 'ಕರ್ಫ್ಯೂ ಜಾರಿಗೊಳಿಸಿರುವ ಪ್ರದೇಶಗಳಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ' ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

'ತೆಸೆರಿಂಗ್‌ ಆಂಗ್ಚುಕ್‌ (72) ಮತ್ತು ತಾಶಿ ಡೊಲ್ಮಾ (60) ಅವರು ಆಸ್ಪತ್ರೆಗೆ ದಾಖಲಾಗಿದ್ದು ಬುಧವಾರದ ಪ್ರತಿಭಟನೆಗೆ ತಕ್ಷಣದ ಪ್ರಚೋದನೆಯಾಗಿರಬಹುದು' ಎಂದು ವಾಂಗ್ಚುಕ್‌ ಗುರುವಾರ ಆನ್‌ಲೈನ್‌ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಲಡಾಖ್‌ನ ಹಿಂಸಾಚಾರವು ಬಿಜೆಪಿಯ ಸ್ವಯಂ ಸೃಷ್ಟಿ ಎಂದು ಕಾಂಗ್ರೆಸ್‌ ಆರೋಪಿಸಿದೆ. 'ಲಡಾಖ್‌ನ ಜನರ ಘನತೆ ಮತ್ತು ಅವರ ಗುರುತಿನ ರಕ್ಷಣೆಗಾಗಿ ರಾಜ್ಯ ಸ್ಥಾನಮಾನದ ಬೇಡಿಕೆಯು ಕಾನೂನುಬದ್ಧ ಮತ್ತು ನ್ಯಾಯಯುತವಾಗಿದೆ' ಎಂದಿದೆ.

'ಶಾಂತಿಯುತ ಪ್ರತಿಭಟನೆ ಸ್ಥಳದಲ್ಲಿ ಹಿಂಸಾಚಾರ ಭುಗಿಲೇಳುವ ವಾತಾವರಣ ಸೃಷ್ಟಿಯಾಗಲು ಕೇಂದ್ರವೇ ಹೊಣೆ' ಎಂದು ಸಿಪಿಎಂ ಹೇಳಿದೆ.

'ಕಿರುಕುಳ ನಿಲ್ಲಿಸಿ'

'ಲಡಾಖ್‌ನ ಜನರ ಮೇಲೆ ನಡೆಯುತ್ತಿರುವ ಕಿರುಕುಳ ಮತ್ತು ಬೇಟೆಯನ್ನು ನಿಲ್ಲಿಸಬೇಕು' ಎಂದು ಕಾರ್ಗಿಲ್‌ ಪ್ರಜಾಸತ್ತಾತ್ಮಕ ಒಕ್ಕೂಟ (ಕೆಡಿಎ) ಒತ್ತಾಯಿಸಿದೆ.

ಬುಧವಾರ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಲು ಆದೇಶ ನೀಡಿದ ಅಧಿಕಾರಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೆಡಿಎ ಅಧ್ಯಕ್ಷ ಅಸ್ಗರ್‌ ಅಲಿ ಕರ್ಬಾಲಿ ಆಗ್ರಹಿಸಿದ್ದಾರೆ.

ಕವೀಂದರ್‌ ಗುಪ್ತಾ ಲೆಫ್ಟಿನಂಟ್‌ ಗವರ್ನರ್‌ಲಡಾಖ್‌ನ ಹಿಂಸಾಚಾರವು ಪಿತೂರಿಯ ಭಾಗ. ಇದು ಸ್ವಯಂಪ್ರೇರಿತ ಅಲ್ಲ. ಹೆಚ್ಚಿನ ಸಾವು-ನೋವು ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ಕರ್ಫ್ಯೂ ಜಾರಿಗೊಳಿಸಿದ್ದೇವೆಸೋನಮ್ ವಾಂಗ್ಚುಕ್‌ ಪರಿಸರ ಹೋರಾಟಗಾರಹಿಂಸಾಚಾರವು ನಮ್ಮ ಉದ್ದೇಶಕ್ಕೆ ಹಾನಿ ಉಂಟುಮಾಡುತ್ತದೆ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ಲಡಾಖ್‌ ಮತ್ತು ದೇಶದಲ್ಲಿ ಅಸ್ಥಿರತೆ ನಮಗೆ ಬೇಡ.

ಪ್ರಚೋದನಕಾರಿ ಹೇಳಿಕೆ; ವಿದೇಶಿ ಕೈವಾಡ

ವಾಂಗ್ಚುಕ್‌ ಅವರ 'ಪ್ರಚೋದನಕಾರಿ ಹೇಳಿಕೆ'ಯಿಂದ ಹಿಂಸಾಚಾರ ನಡೆದಿದೆ ಎಂದು ಕೇಂದ್ರ ಸರ್ಕಾರ ಆರೋಪಿಸಿದೆ. ಸರ್ಕಾರದ ಪ್ರತಿನಿಧಿಗಳು ಮತ್ತು ಲಡಾಖ್‌ ಗುಂಪಿನ ನಡುವೆ ನಡೆಯುತ್ತಿರುವ ಮಾತುಕತೆಯಲ್ಲಿ ಪ್ರಗತಿ ಕಂಡುಬಂದಿದ್ದು ಇದರಿಂದ ಕೆಲವು 'ರಾಜಕೀಯ ಪ್ರೇರಿತ' ವ್ಯಕ್ತಿಗಳಿಗೆ ಅಸಂತೋಷವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಬುಧವಾರ ಪ್ರತಿಭಟನೆಯಲ್ಲಿ ಗಾಯಗೊಂಡವರಲ್ಲಿ ಮೂವರು ನೇಪಾಳದವರು. ಹಿಂಸಾಚಾರದಲ್ಲಿ ವಿದೇಶಿ ಕೈವಾಡದ ಸಾಧ್ಯತೆ ಕುರಿತೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಮೂಲಗಳು ಹೇಳಿವೆ. ಕೇಂದ್ರದೊಂದಿಗೆ ಅ.6ಕ್ಕೆ ಸಭೆ 'ಎಲ್‌ಡಿಎ' ಮತ್ತು 'ಕೆಡಿಎ' ಲಡಾಖ್‌ಗೆ ರಾಜ್ಯದ ಸ್ಥಾನಮಾನ ಮತ್ತು ಇದನ್ನು ಸಂವಿಧಾನದ 6ನೇ ಪರಿಚ್ಚೇದಕ್ಕೆ ಸೇರಿಸಲು ನಾಲ್ಕು ವರ್ಷಗಳಿಂದ ಒತ್ತಾಯಿಸುತ್ತಿವೆ. ಈಗಾಗಲೇ ಕೇಂದ್ರ ಸರ್ಕಾರದೊಂದಿಗೆ ಹಲವು ಸುತ್ತಿನ ಮಾತುಕತೆ ನಡೆದಿದೆ. ಮುಂದಿನ ಸುತ್ತಿನ ಮಾತುಕತೆ ಅಕ್ಟೋಬರ್‌ 6ರಂದು ನಿಗದಿಯಾಗಿದೆ. 'ಲಡಾಖ್‌ನ ಜನರಿಗೆ ಸಾಂವಿಧಾನಿಕ ರಕ್ಷಣೆ ಒದಗಿಸುವ ಮೂಲಕ ಅವರ ಆಶೋತ್ತರಗಳನ್ನು ಈಡೇರಿಸಲು ಸರ್ಕಾರ ಬದ್ಧವಾಗಿದೆ' ಎಂದು ಗೃಹ ಸಚಿವಾಲಯ ಪುನರುಚ್ಛರಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries