ಬದಿಯಡ್ಕ: ಕಾಸರಗೋಡಿನಿಂದ ತಿರುವನಂತಪುರದ ತನಕ ಅಕ್ಟೋಬರ್ 7 ರಿಂದ 21ರ ವರೆಗೆ ನಡೆಯಲಿರುವ ಧರ್ಮ ಸಂದೇಶ ಯಾತ್ರೆಯ ಪೂರ್ವಭಾವಿಯಾಗಿ ಚೆಂಗಳ, ಬದಿಯಡ್ಕ, ಪುತ್ತಿಗೆ, ಎಣ್ಮಕಜೆ, ಕುಂಬ್ಡಾಜೆ ಪ್ರಾದೇಶಿಕ ಸಮಿತಿಗಳ ನೇತೃತ್ವದಲ್ಲಿ ಭಾನುವಾರ ಅಪರಾಹ್ನ ದ್ವಿಚಕ್ರವಾಹನ ಮೆರವಣಿಗೆ ಮತ್ತು ಸಭೆ ಬದಿಯಡ್ಕ ಗಣೇಶ ಮಂದಿರದಲ್ಲಿ ಜರಗಿತು.
ಬದಿಯಡ್ಕ ಮೇಲಿನಪೇಟೆ ಬೋಳುಕಟ್ಟೆಯಿಂದ ಆರಂಭವಾದ ದ್ವಿಚಕ್ರ ವಾಹನ ಮೆರವಣಿಗೆಯಲ್ಲಿ ಕಾರ್ಯಕರ್ತರು ಪಾಲ್ಗೊಂಡಿದ್ದರು. ಪ್ರಧಾನ ವೃತ್ತದಿಂದ ಕಾಲ್ನಡಿಗೆಯ ಮೂಲಕ ಶ್ರೀ ಎಡನೀರು ಮಠದ ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಜೊತೆಗೂಡಿದರು. ಪುಟ್ಟ ಮಕ್ಕಳು ಕುಣಿತ ಭಜನೆಯೊಂದಿಗೆ ಸಾಥ್ ನೀಡಿದರು.
ನಂತರ ನಡೆದ ಸಭಾ ಕಾರ್ಯಕ್ರಮವನ್ನು ಶ್ರೀಗಳು ದೀಪಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿ, ಹಲವು ಗೊಂದಲಗಳು, ರಾಜಕೀಯ ಪಕ್ಷದ ಹಿತಾಸಕ್ತಿಗಳು, ಅಭಿಪ್ರಾಯವ್ಯತ್ಯಾಸಗಳು ನಮ್ಮ ಸಮಾಜದಲ್ಲಿ ಬಿರುಕನ್ನು ಉಂಟುಮಾಡಲು ಕಾರಣವಾಗುತ್ತದೆ. ಹಿಂದುಗಳಿಗೆ ಯಾವುದೇ ಪಕ್ಷವಿಲ್ಲ, ಜಾತಿಮತಬೇಧವಿಲ್ಲ, ನಾವೆಲ್ಲ ಒಂದೇ ಎಂಬ ಭಾವನೆಯಿಂದ ಮುಂದುವರಿಯಬೇಕು. ಹಲವಾರು ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಿ ಮುನ್ನಡೆಯಬೇಕಾಗಿದೆ ಎಂದರು.
ಆರೆಸ್ಸೆಸ್ ಜಿಲ್ಲಾ ಸಹಸಂಚಾಲಕ ಪ್ರಮುಖ ಸುನಿಲ್ ಕುದ್ರೆಪ್ಪಾಡಿ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿ, ಜಗತ್ತಿನಲ್ಲಿ ಹಿಂದೂದೇಶ ಎಂದು ಕರೆಯಲ್ಪಡುವುದು ಭಾರತ ದೇಶವಾಗಿದೆ. ಇಂತಹ ಪುಣ್ಯ ನೆಲದಲ್ಲಿ ನಾವು ಸಂಘಟಿತರಾಗಿ ಬಲಿಷ್ಠರಾಗಬೇಕು. ಯಾವುದೇ ಗೊಂದಲಗಳಿಗೆ ಅವಕಾಶವನ್ನು ನೀಡದೆ ನಾವೆಲ್ಲಾ ಏಕತೆಯ ಭಾವನೆಯಿಂದಿರಬೇಕು ಎಂದರು. ಆರೆಸ್ಸೆಸ್ಸ್ ಬದಿಯಡ್ಕ ತಾಲೂಕು ಸಂಘಚಾಲಕ ರಮೇಶ ಕಳೇರಿ, ವಿಶ್ವಹಿಂದೂ ಪರಿಷತ್‍ನ ಅಧ್ಯಕ್ಷ ಹರೀಶ ರೈ ಸ್ಕಂದ ವೇದಿಕೆಯಲ್ಲಿ ಉಪಸ್ಥಿತರಿದ್ದರು.




.jpg)
