ಕಾಸರಗೋಡು: ಜಿಲ್ಲಾ ಪಂಚಾಯಿತಿಯ 2024-25ನೇ ಸಾಲಿನ ವಾರ್ಷಕ ಯೋಜನೆಯನ್ವಯ ಎಣ್ಮಕಜೆ ಪಂಚಾಯಿತಿ 16ನೇ ವಾರ್ಡು ಖಂಡಿಗೆ ಪರಿಶಿಷ್ಟ ವಿಭಾಗ'ಉನ್ನತಿ'ಯ ಸಮಗ್ರ ಅಭಿವೃದ್ಧಿ ಯೋಜನೆಗಳ ಉದ್ಘಾಟನಾ ಸಮಾರಂಭ ಖಂಡಿಗೆಯಲ್ಲಿ ಜರುಗಿತು.
ಕಾಸರಗೋಡು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಸಮಗ್ರ ಅಭಿವೃದ್ಧಿ ಯೋಜನೆಗಳ ಆರಂಭೋತ್ಸವಕ್ಕೆ ಚಾಲನೆ ನೀಡಿದರು. ಎಣ್ಮಕಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಜೆ. ಎಸ್ ಸೋಮಶೇಖರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯ ನಾರಾಯಣ ನಾಯ್ಕ್ ಅಡ್ಕಡ್ಥಳ, ಗ್ರಾಮ ಪಂಚಾಐಇತಿ ಉಪಾಧ್ಯಕ್ಷೆ ರಮ್ಲಾ ಇಬ್ರಾಹಿಂ, ಮಂಜೇಶ್ವರ ಬ್ಲಾಕ್ ಪಂಚಾಯಿತಿ ಸದಸ್ಯ ಎ.ಪಿ ಅನಿಲ್ ಕುಮಾರ್, ಗ್ರಾಮ ಪಂಚಾಯಿತಿ ಸದಸ್ಯೆ ಸೌದಾಬಿ ಹನೀಫ್ ಉಪಸ್ಥಿತರಿದ್ದರು. ಈ ಸಂದರ್ಭ ಕಮ್ಯೂನಿಟಿ ಸಭಾಂಗಣ ನಿರ್ಮಾಣಕ್ಕಾಗಿ ಸುಮಾರು ಏಳು ಸೆಂಟ್ ಜಾಗ ಉದಾರವಾಗಿ ನೀಡಿದ ಮಹಮ್ಮದ್ ಬಜಕೂಡ್ಲು ಅವರನ್ನು ಜಿಪಂ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಅಭಿನಂದಿಸಿದರು.
ಜಿಲ್ಲಾ ನಿರ್ಮಿತಿ ಕೇಂದ್ರ ಮಹಾಪ್ರಬಂಧಕ ಇ.ಪಿ ರಾಜಮೋಹನ್ ವರದಿ ಮಂಡಿಸಿದರು. ಪ.ಜಾತಿ-ಪ.ವರ್ಗ ಅಭಿವೃದ್ಧಿ ಇಲಾಖೆ ಅಧಿಕಾರಿ ಅಯ್ಯಪ್ಪನ್ ಬಿ.ಸಿ ಸ್ವಾಗತಿಸಿದರು. ಪ್ರಮೋಟರ್ ಅಶೋಕ್ ವಂದಿಸಿದರು.
ಖಂಡಿಗೆ ಎಸ್.ಟಿ 'ಉನ್ನತಿ'ಯಲ್ಲಿ ಸುಮಾರು 48ಲಕ್ಷ ರೂ. ಮೊತ್ತದ ಅಭಿವೃದ್ಧಿ ಯೋಜನೆ ಕೈಗೆತ್ತಿಕೊಳ್ಳಲಾಗಿದ್ದು, ವಿದ್ಯುತ್, ಸುಸಜ್ಜಿತ ಕಮ್ಯೂನಿಟಿ ಹಾಲ್, ಕುಡಿಯುವ ನೀರು ಪೂರೈಕೆ, ಸೋಲಾರ್ ಲೈಟುಗಳ ಅಳವಡಿಕೆ ಸೇರಿದಂತೆ ವಿವಿಧ ಕಾಮಗಾರಿ ನಡೆಯಲಿದೆ.





