ವಾಷಿಂಗ್ಟನ್: ಅಮೆರಿಕ ಸರ್ಕಾರವು ಹೆಚ್ಚು ಸುಂಕ ವಿಧಿಸಿರುವುದು ಕಾನೂನುಬಾಹಿರ ಎಂದು ಇಲ್ಲಿನ ಫೆಡರಲ್ ನ್ಯಾಯಾಲಯವು ನಿಷೇಧ ಹೇರಿರುವ ಬೆನ್ನಲ್ಲೇ, ಈ ವಿಚಾರವನ್ನು ಟ್ರಂಪ್ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದೆ.
'ಫೆಡರಲ್ ಕಾನೂನಿನ ಅಡಿಯಲ್ಲಿ ಆಮದು ವಸ್ತುಗಳ ಮೇಲೆ ಸುಂಕ ಹೇರಲು ಅಧ್ಯಕ್ಷರು ಅಧಿಕಾರ ಹೊಂದಿದ್ದಾರೆ' ಎಂದು ಸುಪ್ರೀಂ ಕೋರ್ಟ್‌ಗೆ ಟ್ರಂಪ್ ಸರ್ಕಾರವು ತಿಳಿಸಿದೆ.
ಟ್ರಂಪ್ ಅವರು ಹೆಚ್ಚಿನ ಸುಂಕ ವಿಧಿಸಿರುವುದು ತುರ್ತು ಅಧಿಕಾರ ಕಾನೂನಿನ ದುರ್ಬಳಕೆಯಾಗಿದೆ. ಇದನ್ನು ರದ್ದುಮಾಡಬೇಕು ಎಂದು ಫೆಡರಲ್ ನ್ಯಾಯಾಲಯವು ತಿಳಿಸಿತ್ತು. ಹೊಸ ಬೆಳವಣಿಗೆಯಲ್ಲಿ ಟ್ರಂಪ್ ಆಡಳಿತವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
'ಈ ಪ್ರಕರಣವನ್ನು ಆದಷ್ಟು ಬೇಗ ನ್ಯಾಯಮೂರ್ತಿಗಳು ಪರಿಗಣಿಸಿ, ನವೆಂಬರ್‌ನಲ್ಲಿಯೇ ವಿಚಾರಣೆ ಆರಂಭಿಸಬೇಕು' ಎಂದು ಸಾಲಿಸಿಟರ್ ಜನರಲ್ ಡಿ.ಜಾನ್ ಸೌರ್ ಅವರು ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಮಾಡಿದರು.
ಅನಿಯಂತ್ರಿತ ಸುಂಕ-ಆತಂಕಕಾರಿ (ನ್ಯೂಯಾರ್ಕ್ ವರದಿ): 'ಭಾರತದ ಮೇಲೆ ಡೊನಾಲ್ಡ್ ಟ್ರಂಪ್ ಸರ್ಕಾರವು ಅನಿಯಂತ್ರಿತ ಸುಂಕ ಹೇರುವ ಮೂಲಕ ಭಾರತದೊಂದಿಗೆ ಸಂಬಂಧಕ್ಕೆ ಭಂಗ ತಂದುಕೊಳ್ಳುವ ಆತಂಕ ಎದುರಾಗಿದೆ' ಎಂದು ಅಮೆರಿಕದ ಸಂಸದ ಗ್ರೆಗೊರಿ ಮೀಕ್ಸ್ ತಿಳಿಸಿದ್ದಾರೆ.
ಮೀಕ್ಸ್ ಅವರು ಡೆಮಾಕ್ರಟ್ಸ್‌ನ ವಿದೇಶಾಂಗ ವ್ಯವಹಾರಗಳ ಸಮಿತಿಯ ಶ್ರೇಯಾಂಕ ಸದಸ್ಯರಾಗಿದ್ದಾರೆ.
ಅಮೆರಿಕದ ಭಾರತದ ರಾಯಭಾರಿ ವಿನಯ್ ಕ್ವಾತ್ರಾ ಜೊತೆಗೆ ಸಭೆ ನಡೆಸಿದ ಬಳಿಕ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
'ಭಾರತ ಹಾಗೂ ಅಮೆರಿಕ ಜೊತೆಗಿನ ಸಂಬಂಧದ ಕುರಿತು ನಿರಂತರ ಬೆಂಬಲವಿದೆ. 'ಕ್ವಾಡ್' ಮೂಲಕ ಕಳೆದ 25 ವರ್ಷಗಳಿಂದ ಉಭಯ ದೇಶಗಳ ನಡುವಿನ ಸಂಬಂಧವು ಮತ್ತಷ್ಟು ಗಟ್ಟಿಯಾಗಿದೆ' ಎಂದು ಮೀಕ್ಸ್ ಅವರು ಕ್ವಾತ್ರಾ ಅವರಿಗೆ ತಿಳಿಸಿದ್ದಾರೆ' ಎಂದು ಡೆಮಾಕ್ರಟ್ಸ್‌ನ ವಿದೇಶಾಂಗ ವ್ಯವಹಾರಗಳ ಸಮಿತಿಯು ತಿಳಿಸಿದೆ.
'ಮೀಕ್ಸ್ ಅವರ ನಾಯಕತ್ವದ ಅಡಿಯಲ್ಲಿ ಅಮೆರಿಕ ಹಾಗೂ ಭಾರತದ ಸಂಬಂಧಕ್ಕೆ ನಿರಂತರ ಸಲಹೆ ಹಾಗೂ ಧೃಡವಾದ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ' ಎಂದು ಕ್ವಾತ್ರಾ ತಿಳಿಸಿದ್ದಾರೆ.
ಪರಸ್ಪರ ಹಿತಾಸಕ್ತಿಯ ವಿಶಾಲ ಸಮಸ್ಯೆಗಳು ಸೇರಿದಂತೆ ವ್ಯಾಪಾರ, ಇಂಧನ ಹಾಗೂ ಇಂಡೋ-ಫೆಸಿಫಿಕ್ ವಿಷಯಗಳಿಗೆ ಸಂಬಂಧಿಸಿ ನಾವು ಮಾತುಕತೆ ನಡೆಸಿದೆವು' ಎಂದು ಅವರು ಹೇಳಿದ್ದಾರೆ.
ಊighಟighಣs - ಭಾರತದ ಮೇಲೆ ಹೆಚ್ಚುವರಿ ಸುಂಕ ಟ್ರಂಪ್ ನಿರ್ಧಾರಕ್ಕೆ ಫೆಡರಲ್ ನ್ಯಾಯಾಲಯ ತಡೆ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ, ತ್ವರಿತ ವಿಚಾರಣೆಗೆ ಮನವಿ
'ರಷ್ಯಾದಿಂದ ಕಚ್ಚಾತೈಲ ಖರೀದಿ- ಭಾರತದ ಮೇಲೆ ಹೆಚ್ಚುವರಿ ಸುಂಕ'
'ಉಕ್ರೇನ್ ಮೇಲೆ ರಷ್ಯಾ ಸಂಘರ್ಷ ಹಿನ್ನೆಲೆಯಲ್ಲಿ ಪೂರ್ವ ಅಸ್ತಿತ್ವದಲ್ಲಿರುವ ರಾಷ್ಟ್ರೀಯ ತುರ್ತು ಪರಿಸ್ಥಿತಿ ಇರುವ ಕಾರಣ ಭಾರತದ ಮೇಲೆ ಹೆಚ್ಚುವರಿ ಸುಂಕ ವಿಧಿಸಲಾಗಿದೆ' ಎಂದು ಟ್ರಂಪ್ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ರಷ್ಯಾದಿಂದ ಭಾರತವು ಕಚ್ಚಾ ತೈಲ ಖರೀದಿಸುತ್ತಿದೆ. ಇದು ಉಕ್ರೇನ್ ಸಂಘರ್ಷ ಬಿಗಡಾಯಿಸಲು ಕಾರಣವಾಗಿದೆ. ಅಲ್ಲಿ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಸುಂಕ ಹೆಚ್ಚಳವು ನಿರ್ಣಾಯಕ ಅಂಶವಾಗಿದೆ' ಎಂದು ಹೇಳಿದೆ. 'ಅಂತರರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರದ ಕಾಯ್ದೆ'ಯ ಅಡಿಯಲ್ಲಿ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ಸುಂಕ ಹೇರಿದ್ದಾರೆ. ರಷ್ಯಾ-ಉಕ್ರೇನ್ ಸಂಘರ್ಷದ ಹಿನ್ನೆಲೆಯಲ್ಲಿ ಪೂರ್ವ ಅಸ್ತಿತ್ವದಲ್ಲಿರುವ ರಾಷ್ಟ್ರೀಯ ತುರ್ತು ಪರಿಸ್ಥಿತಿಯಾಗಿದ್ದು ಶಾಂತಿ ಸ್ಥಾಪನೆ ನಿಟ್ಟಿನಲ್ಲಿ ಈ ಕ್ರಮ ತೆಗೆದುಕೊಂಡಿದ್ದಾರೆ' ಎಂದು ಬುಧವಾರ ಟ್ರಂಪ್ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ 251 ಪುಟಗಳ ವರದಿಯಲ್ಲಿ ತಿಳಿಸಲಾಗಿದೆ.




