ವಯನಾಡ್: ಕೇರಳದ ವಯನಾಡ್‌ನಲ್ಲಿ ಮನುಷ್ಯ-ಆನೆಗಳ ಸಂಘರ್ಷ ಮುಂದುವರಿದಿದ್ದು, ಶನಿವಾರ ಬೆಳಿಗ್ಗೆ 51 ವರ್ಷದ ಬುಡಕಟ್ಟು ವ್ಯಕ್ತಿ ಮೇಲೆ ಕಾಡಾನೆಯೊಂದು ದಾಳಿ ಮಾಡಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ವಯನಾಡ್‌ನ ತಿರುನೆಲ್ಲಿ ಪಂಚಾಯತ್‌ನ ಮಣ್ಣುಂಡಿ ನಿವಾಸಿ ಚಿನ್ನನ್ ಎಂಬವರು ಆನೆ ದಾಳಿಯಲ್ಲಿ ಗಾಯಗೊಂಡವರು. ಕಾಡಿನ ಸಮೀಪ ಇರುವ ತನ್ನ ಮನೆಗೆ ಬಂದ ಆನೆಯನ್ನು ಓಡಿಸಲೆತ್ನಿಸುವಾಗ ದಾಳಿ ನಡೆಸಿದೆ. ಚಿನ್ನನ್ ಅವರ ಪಕ್ಕೆಲುಬುಗಳು ಮತ್ತು ಭುಜಕ್ಕೆ ಗಾಯಗಳಾಗಿವೆ.
ಗಾಯಾಳುವನ್ನು ಮೊದಲಿಗೆ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ನೆರೆಯ ಕೋಯಿಕ್ಕೋಡ್ ಜಿಲ್ಲೆಯ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ರವಾನಿಸಲಾಯಿತು. ಅರಣ್ಯಾಧಿಕಾರಿಗಳು ಹಾಗೂ ರ‍್ಯಾಪಿಡ್ ರೆಸ್ಪಾನ್ಸ್ ಟೀಂ ಸ್ಥಳಕ್ಕೆ ಭೇಟಿ ನೀಡಿ, ಅಗತ್ಯ ಕ್ರಮ ತೆಗೆದುಕೊಂಡಿತು ಎಂದು ಮೂಲಗಳು ತಿಳಿಸಿವೆ.




