ಕಾಸರಗೋಡು: ಜಿಲ್ಲೆಯ ಪನತ್ತಡಿ ಪಾರಕ್ಕಡವಿನಲ್ಲಿ ತಂದೆ ಸ್ವತ: ತನ್ನ ಪುತ್ರಿಯ ಮುಖಕ್ಕೆ ಅ್ಯಸಿಡ್ ಎರಚಿ ಗಂಭೀರ ಗಾಯಗೊಳಿಸಿದ ಘಟನೆ ನಡೆದಿದೆ. ಪುತ್ರಿಯ ಜತೆಗಿದ್ದ ಸಂಬಂಧಿಕೆ, ಹತ್ತರ ಹರೆಯದ ಬಾಲಕಿಗೂ ಆ್ಯಸಿಡ್ ದಾಳಿಯಿಂದ ಗಂಭೀರ ಗಾಯಗಳುಂಟಾಗಿದ್ದು, ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕರ್ನಾಟಕ ಕರಿಕ್ಕೆ ನಿವಾಸಿ ಮನೋಜ್, ಕೃತ್ಯದ ನಂತರ ತಲೆ ಮರೆಸಿಕೊಂಡಿದ್ದಾನೆ. ಪನತ್ತಡಿ ಪಂಚಾಯಿತಿಯ ಪಾರಕ್ಕಡವಿನ ಸಂಬಂಧಿ ಮನೆಗೆ ಆಗಮಿಸಿ ಈತ ಕೃತ್ಯವೆಸಗಿದ್ದಾನೆ. ರಬ್ಬರ್‍ಶೀಟ್ ತಯಾರಿಸಲು ಬಳಸುವ ಆ್ಯಸಿಡ್ ಎರಚಲಾಗಿದೆ. ಮನೋಜ್ ಪುತ್ರಿಯ ಕೈ ಹಾಗೂ ಕಾಲು ಸೇರಿದಂತೆ ಶರೀರದ ವಿವಿಧ ಭಾಗಕ್ಕೆ ಹಾನಿಯುಂಟಾಗಿದೆ. ಆರೋಪಿ ವಿರುದ್ಧ ಮನೆಗೆ ಅತಿಕ್ರಮಿಸಿ ನುಗ್ಗಿರುವುದು, ಕೊಲೆ ಯತ್ನ ಸೇರಿದಂತೆ ವಿವಿಧ ಪ್ರಕರಣಗಳಿಗೆ ಸಂಬಂಧಿಸಿ ರಾಜಾಪುರಂ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಮದ್ಯಪಾನಿ ಮನೋಜ್‍ನ ನಿರಂತರ ಕಿರುಕುಳದಿಂದ ಬೇಸತ್ತ ಈತನ ಪತ್ನಿ ಬೇರೆಯಾಗಿ ವಾಸಿಸುತ್ತಿದ್ದು, ಇದರಿಂದ ಅಸಮಧಾನಗೊಂಡ ಮನೋಜ್ ಪತ್ನಿ ಹಾಗೂ ಪುತ್ರಿ ವಾಸಿಸುತ್ತಿರುವ ಸಂಬಂಧಿಯ ಮನೆಗೆ ತೆರಳಿ ಕೃತ್ಯವೆಸಗಿದ್ದಾನೆ. ಕೃತ್ಯದಿಂದ ಮನೋಜ್‍ನ ಶರೀರಕ್ಕೂ ಆ್ಯಸಿಡ್ ಬಿದ್ದು ಸುಟ್ಟ ಗಾಯಗಳುಂಟಾಗಿದೆ ಎನ್ನಲಾಗಿದೆ.




