ಉಪ್ಪಳ: ಕೈಕಂಬ ಸನಿಹ ರಾಷ್ಟ್ರೀಯ ಹೆದ್ದಾರಿಯಲ್ಲಿ ಟಯರ್ ಪಂಕ್ಚರ್ ಆದ ಲಾರಿ ಹಾಗೂ ಇನ್ನೊಂದು ಟೆಂಪೋದ ಚಾಲಕ ಸೇರಿದಂತೆ ಮೂರು ಮಂದಿಗೆ ಇನ್ನೊಂದು ಟೆಂಪೋ ಡಿಕ್ಕಿಯಾದ ಪರಿಣಾಮ ಮೂರೂ ಮಂದಿ ಗಂಭೀರ ಗಾಯಗೊಂಡಿದ್ದು, ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಶನಿವಾರ ನಸುಕಿಗೆ ಅಪಘಾತ ನಡೆದಿದೆ. ಮೀನುಸಾಗಾಟದ ಟೆಂಪೋ ಚಾಲಕ ತಮಿಳ್ನಾಡು ನಾಗರಕೋವಿಲ್ ನಿವಾಸಿ ಮಹಮ್ಮದ್ ರಿಯಾಸ್, ಕ್ಲೀನರ್ ಪುನ್ನಪ್ರ ಮನ್ನಪರಂಬ ನಿವಾಸಿ ಎ.ರಾಜ ಸೇರಿದಂತೆ ಮೂವರು ಗಾಯಾಳುಗಳು.
ಕಾಸರಗೋಡಿನಿಂದ ಮಂಗಳೂರು ಭಾಗಕ್ಕೆ ಮೀನು ಸಾಗಿಸುತ್ತಿದ್ದ ಟೆಂಪೋ ಉಪ್ಪಳ ನಯಾಬಜಾರ್ ತಲುಪಿದಾಗ ಟಯರ್ ಪಂಕ್ಚರ್ ಆಗಿತ್ತು. ಇದರಿಂದ ಲಾರಿಯಲ್ಲಿದ್ದ ಇಬ್ಬರೂ ಸಿಬ್ಬಂದಿ ಇಳಿದು, ಇನ್ನೊಂದು ಟೆಂಪೋಗೆ ಕೈಕಾಣಿಸಿ ಸಹಾಯ ಯಾಚಿಸಿದ್ದಾರೆ. ಈ ಮಧ್ಯೆ ಮೂರೂ ಮಂದಿ ರಸ್ತೆ ಅಂಚಿಗೆ ನಿಂತು ಮಾತನಾಡುತ್ತಿರುವ ಮಧ್ಯೆ ಹಿಂದಿನಿಮದ ಆಗಮಿಸಿದ ಇನ್ನೊಂದು ಟೆಂಪೋ ಮೂರೂ ಮಂದಿಗೆ ಡಿಕ್ಕಿಯಾಗಿ, ಎದುರಿಗಿದ್ದ ಟೆಂಪೋಗೆ ಬಡಿದು ನಿಂತಿದೆ. ಈ ಸಂದರ್ಭ ಗಂಭೀರ ಗಾಯಗೊಂಡು ಬಿದ್ದಿದ್ದ ಮೂರೂ ಮಂದಿಯನ್ನು ಈ ಹಾದಿಯಾಗಿ ಆಗಮಿಸಿದ ಕಾರಿನಲ್ಲಿದ್ದ ಪ್ರಯಾಣಿಕರು ಸನಿಹದ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಿದ ನಂತರ ಆಂಬುಲೆನ್ಸ್ ಮೂಲಕ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.




