ಮುಳ್ಳೇರಿಯ: ಹೆಚ್ಚಿನ ವರದಕ್ಷಿಣೆಗೆ ಆಗ್ರಹಿಸಿ ಪತ್ನಿಗೆ ತ್ರಿವಳಿ ತಲಾಖ್ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಪತಿ ಸೇರಿದಂತೆ ಮೂವರ ವಿರುದ್ಧ ಆದೂರು ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಆದೂರುಪೊಲೀಸ್ ಠಾಣೆ ವ್ಯಾಪ್ತಿಯ ದೇಲಂಪಾಡಿ ಚಾಮತ್ತಡ್ಕ ನಿವಾಸಿ ಸಿ. ಅಬ್ದುಲ್‍ವಾಜಿದ್‍ನ ಪತ್ನಿ, ಮಂಗಳೂರು ಪಂಪ್‍ವೆಲ್ ನಿವಾಸಿ ಎಂ. ಆಯಿಷತ್ ಮುಸೈನಾ(25)ಅವರ ದೂರಿನನ್ವಯ ಈ ಕೇಸು ದಾಖಲಾಗಿದೆ.
ಮುಸೈನಾ ಪತಿ ಸಿ. ಅಬ್ದುಲ್ ವಾಜಿದ್, ಈತನ ತಂದೆ ಮಹಮ್ಮದ್‍ಕುಞÂ ಹಾಗೂ ತಾಯಿ ಮೈಮುನಾ ವಿರುದ್ಧ ಈ ಕೇಸು. ಸಿ. ಅಬ್ದುಲ್ ವಾಜಿದ್ ಹಾಗೂ ಆಯಿಷತ್ ಮುಸೈನಾ ಅವರ ವಿವಾಹ 2018 ನ. 11ರಂದು ನಡೆದಿದ್ದು, ಈ ಸಂದರ್ಭ ವರದಕ್ಷಿಣೆಯಾಗಿ ಚಿನ್ನ ಹಾಗೂ ನಗದು ನೀಡಲಾಗಿತ್ತು. ಮದುವೆ ನಂತರ ಪತಿಮನೆಯಲ್ಲಿ ಆಯಿಷತ್ ಮುಸೈನಾ ಪತಿ ಮನೆಯಲ್ಲಿ ವಾಸಿಸುತ್ತಿದ್ದರು. ಈ ಮಧ್ಯೆ ತವರಿಂದ ಹೆಚ್ಚಿನ ಚಿನ್ನ ತಂದುಕೊಡುವಂತೆ ಅತ್ತೆ ಮತ್ತು ಮಾವ ನಿರಂತರ ಮಾನಸಿಕ ಕಿರುಕುಳ ನೀಡುತ್ತಿರುವ ಬಗ್ಗೆ ಆಯಿಷತ್ ಮುಸೈನಾ ನೀಡಿದ ದೂರಿನನ್ವಯ ಆದೂರು ಠಾಣೆ ಪೊಲೀಸರು ಕೇಸು ದಾಖಲಿಸಿಕೊಮಡಿದ್ದರು. ಈ ಮಧ್ಯೆ ಆಯಿಷತ್ ಮುಸೈನಾ ಮಂಗಳೂರಿನ ತನ್ನ ಮನೆಗೆ ತೆರಳಿದ್ದ ಸಂದರ್ಭ ಆ. 4ರಂದು ಸಂಜೆ ಪತಿ ಸಿ. ಅಬ್ದುಲ್‍ವಾಜಿದ್ ಆಗಮಿಸಿ ತ್ರಿವಳಿ ತಲಾಖ್ ನೀಡಿ ವಿವಾಹ ವಿಚ್ಛೇದನ ನೀಡಿರುವುದಾಗಿ ಆಯಿಷತ್ ಮುಸೈನಾ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಆದೂರು ಪೊಲೀಸ್ ಠಾಣೆಯಲ್ಲಿ ತಿಂಗಳುಗಳ ಹಿಂದೆಯಷ್ಟೆ ತ್ರಿವಳಿ ತಲ್ಲಾಖ್ ಪ್ರಕರಣಕ್ಕೆ ಸಂಬಂಧಿಸಿ ದೂರು ದಾಖಲಾಗಿದ್ದು, ಪ್ರಕರಣದ ಆರೋಪಿ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿ ಪರಿಗಣನೆಗೆ ಬರುವ ಮೊದಲೇ ಮತ್ತೊಂದು ತ್ರಿವಳಿ ತಲ್ಲಾಖ್ ದೂರು ದಾಖಲಾಗಿದೆ.




