ಕಾಸರಗೋಡು: ಬಡ ಹಾಗೂ ಅನಾರೋಗ್ಯಪೀಡಿತರ ಚಿಕಿತ್ಸೆಗಾಗಿ ಕಳೆದ ಹಲವು ವರ್ಷಗಳಿಂದ ಜೀವಕಾರುಣ್ಯ ಯಾತ್ರೆ ನಡೆಸಿಕೊಂಡು ಬರುತ್ತಿರುವ ಮೂಕಾಂಬಿಕಾ ಟ್ರಾವೆಲ್ಸ್ ತನ್ನ ನೂರನೇ ಕಾರುಣ್ಯ ಸೆಪ್ಟೆಂಬರ್ 1 ರಂದು ಪೂರೈಸುವುದರೊಂದಿಗೆ ಕಾರುಣ್ಯ ಯಾತ್ರೆಯನ್ನು ಸಂಪನ್ನಗೊಳಿಸಲು ತೀರ್ಮಾನಿಸಿರುವುದಾಗಿ ಯಾತ್ರೆಯ ಸಂಯೋಜಕ ಬಾಲಗೋಪಾಳನ್ ಕಕ್ಕಾಣತ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ತನ್ನ ನೂರನೇ ಕಾರುಣ್ಯ ಯಾತ್ರೆಯ ಮೂಲಕ ಲಭ್ಯವಾಗುವ ಮೊತ್ತವನ್ನು ಉಪ್ಪಳ ಶೇಖ್ ಸೈಯದ್ ವೃದ್ಧಾಶ್ರಮ, ಕಾಞಂಗಾಡಿನ ಸೇವಾ ಭಾರತಿಯ ಅಭಯಂ ವೃದ್ಧಾಶ್ರಮ ಕೇಂದ್ರ ಮತ್ತು ಕಾಞಂಗಾಡು ಮಲ್ಪಚ್ಚೇರಿಯ ನ್ಯೂ ಮಲಬಾರ್ ಪುನರ್ವಸತಿ ಕೇಂದ್ರದ ಅಭಯಾಶ್ರಮವಾಸಿಗಳಿಗೆ ಓಣಂ ಔತಣ ವಿತರಿಸುವುದರ ಜತೆಗೆ ಧನಸಹಾಯ ನೀಡಲಾಗುವುದು. ಶ್ರೀಮೂಕಾಂಬಿಕಾ ಸಂಸ್ಥೆಯ ಮೂರು ಬಸ್‍ಗಳನ್ನು ಕಾರುಣ್ಯ ಯಾತ್ರೆಯ ಅಂಗವಾಗಿ ಕಾಞಂಗಾಡ್-ಕೊನ್ನಕ್ಕಾಡ್-ಪಾಣತ್ತೂರು ರೂಟಲ್ಲಿ ಚಲಾಯಿಸಲಾಗುತ್ತಿದೆ.
ಗುಡ್ಡಗಾಡು ಪ್ರದೇಶದಲ್ಲಿ ಪ್ರಯಾಣ ಸೌಲಭ್ಯ ಕಡಿಮೆಯಿರುವ ಪ್ರದೇಶದಲ್ಲಿ ಪಾಶ್ರ್ವವಾಯುವಿಗೆ ಒಳಗಾದ ರೋಗಿಗಳಿಗೆ ನೆರವುನೀಡುವ ನಿಟ್ಟಿನಲ್ಲಿ ಪ್ರಾರಂಭಿಸಲಾದ ಜೀಪ್ ಪ್ರಯಾಣ ಸೇವೆಯಿಂದ ಮೂಕಾಂಬಿಕಾ ಬಸ್ ಮಾಲಿಕ ವಿದ್ಯಾಧರನ್ ಕಾಟ್ಟೂರ್ ಅವರು ನಿರ್ಗತಿಕ ರೋಗಿಗಳಿಗೆ ಸಹಾಯ ಒದಗಿಸಲು ಪ್ರತಿ ತಿಂಗಳು ತಮ್ಮ ಬಸ್ಸನ್ನು ಒಂದು ದಿನ ಜೀವಕಾರುಣ್ಯ ಯಾತ್ರೆಗಾಗಿ ಮೀಸಲಿರಿಸಲು ಆರಂಭಿಸಿದ್ದಾರೆ. ಈ ಮೂಲಕ ಬಡವರಿಗೆ ಸಹಾಯ ಒದಗಿಸುತ್ತಾ ಬಂದಿದ್ದಾರೆ. ಜೀಪ್ ಚಾಲಕನಾಗಿ ತನ್ನ ಸೇವೆ ಪ್ರಾರಂಭಿಸಿ, ನಂತರ ಬಡವರಿಗೆ ಯಾವುದೇ ಸಮಯದಲ್ಲಿ ಸಹಾಯ ಮಾಡಲು ಬಸ್ ಖರೀದಿಸಿದ್ದಾರೆ. ಕೋಟ್ಟಾಯಂನಲ್ಲಿ ಖಾಸಗಿ ಬಸ್ಸೊಂದು ಕಾರುಣ್ಯ ಯಾತ್ರೆ ಕೈಗೊಳ್ಳುತ್ತಿರುವುದರಿಂದ ಪ್ರೇರಣೆ ಪಡೆದು ತಾವೂ ಜಿಲ್ಲೆಯಲ್ಲಿ ಕಾರುಣ್ಯ ಯಾತ್ರೆ ಆರಂಭಿಸಿದ್ದಾರೆ. ಪ್ರತಿ ತಿಂಗಳ ಮೊದಲ ದಿನದಂದು ಕಾರುಣ್ಯ ಯಾತ್ರೆ ಆಯೋಜಿಸಿಕೊಂಡು ಬಂದಿದ್ದಾರೆ. ಖಾಸಗಿ ಬಸ್ ವಲಯ ಅನುಭವಿಸುತ್ತಿರುವ ಸಂದಿಗ್ಧ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕಾರುಣ್ಯ ಯಾತ್ರೆಯನ್ನೂ ಸ್ಥಗಿತಗೊಳಿಸಲು ತೀರ್ಮಾನಿಸಲಾಗಿದ್ದರೂ, ಬದಲಿ ಮಾರ್ಗದ ಮೂಲಕ ಕಾರುಣ್ಯ ನೆರವು ಮುಮದುವರಿಯಲಿರುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮೂಕಾಂಬಿಕಾ ಟ್ರಾವೆಲ್ಸ್ ಮಾಲಕ ವಿದ್ಯಾಧರನ್ ಕಾಟ್ಟೂರು, ಹೊಸದುರ್ಗ ತಾಲೂಕು ಬಸ್ ಆಪರೇಟರ್ಸ್ ಫೆಡರೇಶನ್ ಸದಸ್ಯ ಹಾಗೂ ಆರ್.ಎಂ.ಎಸ್ ಬಸ್ ಮಾಲಿಕ ಮನ್‍ಮದ್ ಮೋಹನ್ ಉಪಸ್ಥಿತರಿದ್ದರು.




